ಲಕ್ಷ ಲಕ್ಷ ರೂ. ದೋಖಾ ಮಾಡಿದ ಬ್ಯಾಂಕಿಂಗ್ ಕೋಚಿಂಗ್ ಸೆಂಟರ್
ಶನಿವಾರ, 24 ಆಗಸ್ಟ್ 2019 (17:00 IST)
ಕೋಚಿಂಗ್ ಸೆಂಟರ್ ನ್ನು ನಂಬಿ ಕೈ ಸುಟ್ಟುಕೊಂಡ ವಿದ್ಯಾರ್ಥಿಗಳ ಗೋಳು ಒಂದು ಕಡೆಯಾದರೆ, ವಿದ್ಯಾರ್ಥಿಗಳಿಗೆ ಮೋಸ ಮಾಡಿ ಕೋಚಿಂಗ್ ಸೆಂಟರ್ ಗೆ ಬೀಗ ಜಡಿದು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ ಆರೋಪಿಗಳು.
ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ. ಆಂಧ್ರ ಪ್ರದೇಶದಿಂದ ಕರ್ನಾಟಕ ಗಡಿಭಾಗವಾದ ಚಿಂತಾಮಣಿ ನಗರಕ್ಕೆ ಬಂದು, ನಿರುದ್ಯೋಗ ವಿದ್ಯಾರ್ಥಿಗಳಿಗೆ ಲೈಫ್ ಟೈಮ್ ತರಬೇತಿ ಕೊಡುತ್ತೇವೆಂದು ನಂಬಿಸಿ, ಪ್ರತಿ ವಿದ್ಯಾರ್ಥಿಯ ಬಳಿ ಹನ್ನೆರಡು ಸಾವಿರ ಹಣ ಕಸಿದುಕೊಂಡು ಮೋಸ ಮಾಡಿ ರಾತ್ರೋ ರಾತ್ರಿ ಕೋಚಿಂಗ್ ನಡೆಸುತ್ತಿದ್ದ ಕೊಠಡಿಗೆ ಬೀಗ ಜಡಿದು ಗಂಟು ಮೂಟೆ ಕಟ್ಟಿಕೊಂಡು ಪರಾರಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆಂಧ್ರ ಪ್ರದೇಶದ ಕಡಪ, ಚಿತ್ತೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದೇ ರೀತಿ ಅಮಾಯಕ ನಿರುದ್ಯೋಗ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಆಡಿರುವುದು ಬೆಳಕಿಗೆ ಬಂದಿದೆ.
ಇನ್ನೂ ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದರೆ, ನನಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೊತ್ತು, ಜಗನ್ ಗೊತ್ತು ಅಂತ ನಿಮ್ಮ ಕೈಯಲ್ಲಿ ಏನೂ ಸಾಧ್ಯವಿಲ್ಲವೆಂದು ಕೋಚಿಂಗ್ ನಡೆಸಿದೋರು ಧಮ್ಕಿ ಹಾಕುತ್ತಾರಂತೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಟರ್ನಿಂಗ್ ಪಾಯಿಂಟ್ ಕೋಚಿಂಗ್ ಸೆಂಟರ್ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.