ಲೋಡ್ ಲೋಡ್ ಮೇವು ತಂದೋರಾರು: ಮಾದರಿಯಾದ ಜನರು

ಮಂಗಳವಾರ, 20 ಆಗಸ್ಟ್ 2019 (19:14 IST)
ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕ ಭಾಗದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಿಗಡಾಯಿಸಿದೆ.

ಎಲ್ಲಾ ದಾನಿಗಳು ಜನರಿಗೆ ಆಹಾರ ಹಾಗೂ ದಿನನಿತ್ಯದ ವಸ್ತುಗಳನ್ನು ನೀಡುತ್ತಿದ್ದಾರೆ. ಆದರೆ ಅಲ್ಲಿನ ಜಾನುವಾರುಗಳು  ಆಹಾರವಿಲ್ಲದೆ ನಲುಗಿವೆ. ಈ ಜಾನುವಾರುಗಳಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮಸ್ಥರು 11 ಲೋಡ್ ಮೇವನ್ನು ಹೊತ್ತು ಉತ್ತರ ಕರ್ನಾಟಕ ಭಾಗಕ್ಕೆ ತೆರಳಿದ್ದಾರೆ.

ಪ್ರವಾಹದಿಂದ ಉತ್ತರ ಕರ್ನಾಟಕ ಭಾಗ ಸಂಪೂರ್ಣವಾಗಿ ನಲುಗಿದ್ದು, ಇಲ್ಲಿನ ಜನ ಊಟಕ್ಕೂ ಹರಸಾಹಸ ಪಡುವಂತಾಗಿದೆ. ಇನ್ನೂ ಇಲ್ಲಿನ ಜಮೀನು ಇನ್ನಿತರೆ ಮೇವು ಬೆಳೆಯುವ ಜಾಗಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ.  ಈ ಹಿನ್ನಲೆ ಜಾನುವಾರುಗಳಿಗೆ ಮೇವು ಸಿಗದಂತಾಗಿದ್ದು, ಮೇವಿಗೆ ಬೇಡಿಕೆ ಹೆಚ್ಚಿದೆ.

ಈ ಭಾಗದಲ್ಲಿ ಪ್ರವಾಹದಿಂದ ಜಾನುವಾರುಗಳಿಗೂ ಸಹ ಆಹಾರವಿಲ್ಲದಂತಾಗಿವೆ. ಈ ವಿಷಯವನ್ನರಿತ ಜಿಗಳಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರ ತಂಡ ಮೇವನ್ನು ಕಳುಹಿಸಲು ಮುಂದಾಗಿ ಮೂರು ದಿನಕ್ಕೆ ಬರೋಬ್ಬರಿ 11 ಲೋಡ್ ಹುಲ್ಲನ್ನು ಸಂಗ್ರಹಿಸಿದ್ದಾರೆ. ಪ್ರತಿ ರೈತರ ಮನೆಗೆ ತೆರಳಿದ ಯುವಕರ ಗುಂಪು ಮೇವನ್ನು ಸಂಗ್ರಹ ಮಾಡಿದೆ.

ಇನ್ನೂ ಈ ಯುವಕರ ತಂಡಕ್ಕೆ ರೈತರು, ಗ್ರಾಮಸ್ಥರು ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ. ಮೇವು ತುಂಬಿದ್ದ 11 ಟ್ರ್ಯಾಕ್ಟರ್ ಗಳಿಗೆ ಬಾಳೆ ಕಂಬ ಕಟ್ಟಿ ಪೂಜೆ ಸಲ್ಲಿಸಿ ಬಳಿಕ ಉತ್ತರ ಕರ್ನಾಟಕದ ಬಾದಾಮಿ ತಾಲ್ಲೂಕಿನ ಶಿವಯೋಗಿ ಮಂದಿರ ಸೇರಿದಂತೆ ವಿವಿಧ ಹಳ್ಳಿಗಳಿಗೆ ಮೇವು ನೀಡಲು ಹೊರಟರು.

 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ