ಅಪ್ಪನಿಗೆ ಊಟ ಕೊಡಲು ಹೊರಟಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಜೀವಾವಧಿ ಶಿಕ್ಷೆ
ಶನಿವಾರ, 9 ನವೆಂಬರ್ 2019 (20:07 IST)
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಗಣೇಶ ತಂದೆ ತುಕಾರಾಮ ಈತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೋಪಾಲಪ್ಪ ಎಸ್. ತೀರ್ಪು ನೀಡಿದ್ದಾರೆ.
2017ರ ಸೆಪ್ಟೆಂಬರ್ 24 ರಂದು ಮಧ್ಯಾಹ್ನ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಪನೂರ ಕೈಗಾರಿಕಾ ವಸಾಹತು ಪ್ರದೇಶದ ಎರಡನೇ ಹಂತದಲ್ಲಿರುವ ಆರಿಫ್ ಶೇಠ್ ಅವರ ಪ್ಲಾಸ್ಟಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆ ಬಸವರಾಜನಿಗೆ ಅಪ್ರಾಪ್ತ ವಯಸ್ಸಿನ ಮಗಳು ಊಟ ತೆಗೆದುಕೊಂಡು ಹೋಗಿದ್ದಳು. ಈ ಸಂದರ್ಭದಲ್ಲಿ ಆರೋಪಿತ ಗಣೇಶ ತಂದೆ ತುಕಾರಾಮ ಬಾಲಕಿಯನ್ನು ಎಳೆದಾಡಿ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಂದಿನ ಪಿ.ಎಸ್.ಐ. ಚಂದ್ರಶೇಖರ್ ತಿಗಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪೋಸ್ಕೋ ಕಾಯ್ದೆಯ ಕಲಂ 4ರಡಿ ಅಪರಾಧವೆಸಗಿದ್ದು ಸಾಬೀತಾಗಿರುವುದರಿಂದ ಕಲಂ 376(2)(i) ಐ.ಪಿ.ಸಿ. ಮತ್ತು ಪೋಸ್ಕೋ ಕಾಯ್ದೆಯ ಕಲಂ 4ರ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ರೂಪದ ಹಣದಲ್ಲಿ ಶೋಷಿತ ಬಾಲಕಿಗೆ 50 ಸಾವಿರ ರೂ. ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಕಟಿಸಿದ್ದಾರೆ.