ಮಂಡ್ಯ: ಹೆಲ್ಮೆಟ್ ತಪಾಸಣೆಗಾಗಿ ಬೈಕ್ ನಿಲ್ಲಿಸಲು ಸಂಚಾರಿ ಪೊಲೀಸರು ಸೂಚನೆ ನೀಡಿದ್ದರಿಂದ ಸಮತೋಲನ ತಪ್ಪಿ ಬಿದ್ದ ಮೂರು ವರ್ಷದ ಮಗು ಸಾವನ್ನಪ್ಪಿದ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಸ್ವರ್ಣಸಂದ್ರ ಬಳಿ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ತಮ್ಮ ಮೂರು ವರ್ಷದ ಮಗು ಹೃತೀಕ್ಷಾಳನ್ನು ಅಶೋಕ್ ಮತ್ತು ವಾಣಿ ದಂಪತಿ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.
ಮಗುವಿಗೆ ನಾಯಿ ಕಚ್ಚಿದ್ದರಿಂದ ತಮ್ಮದೇ ದುಗುಡದಲ್ಲಿದ್ದ ದಂಪತಿ ಪೊಲೀಸರು ತಡೆದಿದ್ದರಿಂದ ಗಲಿಬಿಲಿಯಾದರು. ಈ ವೇಳೆ ಬೈಕ್ ಸಮತೋಲನ ಕಳೆದುಕೊಂಡು ಬಿದ್ದಿದೆ. ತನ್ನ ಪೋಷಕರ ಮಡಿಲಿನಲ್ಲಿ ಕುಳಿತಿದ್ದ ಮಗು ಕೂಡಾ ಆಯತಪ್ಪಿ ಬಿದ್ದಿದ್ದು ತಲೆಗೆ ತೀವ್ರ ಪೆಟ್ಟಾಗಿದೆ.
ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಮಗು ತಾಯಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿದೆ. ಮಗುವನ್ನು ಕಳೆದುಕೊಂಡು ರಸ್ತೆಯಲ್ಲೇ ಕುಳಿತು ಪೋಷಕರು ಗೋಳಾಡುತ್ತಿದ್ದರೆ ಅಲ್ಲಿ ಸೇರಿದ್ದ ಜನ ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ.
ಇನ್ನು ಘಟನೆ ಬಳಿಕ ಜನ ರೊಚ್ಚಿಗದ್ದಿದ್ದರು. ಹೀಗಾಗಿ ಸ್ಥಳಕ್ಕೆ ಸ್ಥಳೀಯ ಶಾಸಕ ರವಿ ಗಣಿಗ ಬಂದು ಸಾಂತ್ವನ ಹೇಳಿದರು. ಅಲ್ಲದೇ ಮೃತ ಪೋಷಕರಿಗೆ ಸರ್ಕಾರದ ಕಡೆಯಿಂದ ಮತ್ತು ತಮ್ಮ ಕಡೆಯಿಂದ ವೈಯಕ್ತಿಕವಾಗಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.