ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕೋವಿಡ್ 4ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ, ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ 'ಮಾಸ್ಕ್ ಕಡ್ಡಾಯ' ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 291 ಪಾಸಿಟಿವ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ. ಶಾಪಿಂಗ್ ಮಾಲ್ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಮತ್ತು ಜನರು ಸೇರುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದಂತೆ ಬಿಬಿಎಂಪಿ ಮಾರ್ಷಲ್ಗಳು ಜನರಿಗೆ ಎಚ್ಚರಿಕೆ ನೀಡಲಿದ್ದಾರೆ. ಆದರೆ ಪ್ರಸ್ತುತ ಪಾಲಿಕೆಯು ಸರ್ಕಾರದ ಆದೇಶಕ್ಕೆ ಬದ್ಧವಾಗಿದೆ ಮತ್ತು ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.