ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿರುಸಿನ ಮತದಾನ

ಶುಕ್ರವಾರ, 10 ಡಿಸೆಂಬರ್ 2021 (20:08 IST)
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನಿಂದಲೇ‌ ಬಿರುಸಿನ‌ ಮತದಾನ ಆರಂಭವಾಗಿದೆ.ಪೂರ್ವಾಹ್ನ 10.30ರ ವೇಳೆಗೆ ಜಿಲ್ಲೆಯಲ್ಲಿ‌ ಶೇ.36ರಷ್ಟು ಮತದಾನವಾಗಿತ್ತು.
ಜಿಲ್ಲೆಯಲ್ಲಿ 1329 ಮಂದಿ‌ ಮತದಾನದ ಹಕ್ಕು ಪಡೆದಿದ್ದು, ಮಡಿಕೇರಿ ನಗರಸಭೆ ಆವರಣದಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಹಾಗೂ ನಗರಸಭೆಯ ಚುನಾಯುತ ಸದಸ್ಯರು ಬೆಳಗ್ಗೆಯೇ ಮತ ಚಲಾಯಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ನಗರದ ಕೋಟೆ ಮಹಾಗಣಪತಿ‌ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರ ಗೆಲುವಿಗಾಗಿ ಪ್ರಾರ್ಥಿಸಿ, ಬಳಿಕ ನಗರಸಭೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆದಿದ್ದರೂ, ಮಡಿಕೇರಿಯಲ್ಲಿ ಮತ ಚಲಾಯಿಸಿರುವುದು ವಿಶೇಷವಾಗಿತ್ತು.
ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ‌ಪರಿಷತ್ ನ ಒಂದು‌ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಹಾಗೂ ಬಿಜೆಪಿಯ ಸುಜಾ ಕುಶಾಲಪ್ಪ ನಡುವೆ ನೇರ ಸ್ಪರ್ಧೆ ಇರುವುದರಿಂದ ಈ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ