ಕಾರು ಅಪಘಾತದಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಗಾಯ: ಶಾಸಕ ಸಿ.ಟಿ. ರವಿ ಪ್ರತಿಕ್ರಿಯೆ ಹೇಗಿತ್ತು

Sampriya

ಮಂಗಳವಾರ, 14 ಜನವರಿ 2025 (14:38 IST)
ಚಿಕ್ಕಮಗಳೂರು: ಇಂದು ಬೆಳಿಗ್ಗೆ ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಇಂದು ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ.  

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಸಹೋದರ ಚನ್ನರಾಜ ಹಟ್ಟಿಹೊಳಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಎಂಎಲ್‌ಸಿ ಸಿ.ಟಿ.ರವಿ ನಡುವೆ ರಾಜಕೀಯ ಘರ್ಷಣೆಯಾಗಿತ್ತು. ಸದನದಲ್ಲೇ ಸಚಿವೆಯನ್ನು ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ ಆರೋಪ ಸಿ.ಟಿ.ರವಿ ಅವರ ಮೇಲಿತ್ತು. ಇದು ಎರಡೂ ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ತನ್ನ ಮೇಲೆ ಅವಾಚ್ಯ ಪದ ಬಳಕೆ ಮಾಡಲಾಗಿದೆ ಎಂದು ಸಚಿವೆ ಆರೋಪಿಸಿ ಕಣ್ಣೀರು ಹಾಕಿದ್ದರು.

ಘಟನೆ ನಡೆದ ದಿನ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದ್ದರು. ಆ ದಿನ ರಾತ್ರಿ ಹಲವು ನಾಟಕೀಯ ಬೆಳವಣಿಗೆ ನಡೆದವು. ಮಾರನೇ ದಿನ ಕೋರ್ಟ್‌ನಲ್ಲಿ ಬಿಜೆಪಿ ನಾಯಕನಿಗೆ ಜಾಮೀನು ಸಿಕ್ಕಿತು. ನಂತರವೂ ಲಕ್ಷ್ಮಿ ಮತ್ತು ರವಿ ನಡುವೆ ಮಾತಿನ ಸಮರ ಮುಂದುವರಿದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ