ಗದಗ : ರಾಜ್ಯ ಬಿಜೆಪಿ ಮುಖಂಡರ ಮುಖ ನೋಡಲು ಮೋದಿಯವರಿಗೆ ಅಸಡ್ಡೆಯಾಗಿದೆ. ಮೋದಿ ಬೆಂಗಳೂರಿಗೆ ಬಂದರೆ ಅವರತ್ತ ನೋಡಲೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಗದಗ ಜಿಮ್ಸ್ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯವರು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಬೀದಿಯಲ್ಲಿ ನಿಂತಿದ್ದರು. ಆದರೆ ಅವರು ಇವರನ್ನು ತಿರುಗಿಯೂ ನೋಡಲಿಲ್ಲ. ಇವರಿಗಾದರೂ ಸ್ವಾಭಿಮಾನ ಇರಬೇಕಲ್ವಾ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾರು ಬರಬೇಡಿ ಅಂತಾ ಅವರೇ ಹೇಳಿದ್ದರು. ಅದಕ್ಕೆ ನಮ್ಮವರು ಯಾರೂ ಹೋಗಿರಲಿಲ್ಲ. ಬಿಜೆಪಿಯವರು ಹೋಗಿದ್ದರು. ಆದರೆ ಮೋದಿ ಅವರನ್ನು ಕಣ್ಣು ತಿರುಗಿಸಿಯೂ ನೋಡಿಲ್ಲ.
ಮೋದಿಯವರನ್ನು ಕರೆಸಿ ಬೀದಿ ಬೀದಿ ಓಡಾಡಿಸಿ ಮಾನ, ಮರ್ಯಾದೆ ತೆಗೆದರು. ಮೋದಿ ಹೆಸರಲ್ಲಿ ವೋಟ್ ಕೇಳಿದರು. ಬಂದಿದ್ದು 60 ಸೀಟ್ ಮಾತ್ರ. ಮೋದಿ ಹೆಸರು ಹಾಳು ಮಾಡಿದ್ದಕ್ಕೆ ಅವರು ಇವರನ್ನು ನೋಡಲಿಲ್ಲ ಎಂದರು.