ಬೆಂಗಳೂರು: ಪಹಲ್ಗಾಮ್ ನಲ್ಲಿ ಉಗ್ರ ದಾಳಿಗೆ ತುತ್ತಾದ ಮಂಜುನಾಥ್ ಮಗ ಅಭಿಜಯ್ ಮತ್ತು ಭರತ್ ಭೂಷಣ್ ಮಗನ ಶಿಕ್ಷಣದ ಸಂಪೂರ್ಣ ಜವಾಬ್ಧಾರಿಯನ್ನು ಸಂಸದ ತೇಜಸ್ವಿ ಸೂರ್ಯ ತೆಗೆದುಕೊಂಡಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಸಾವನ್ನಪ್ಪಿದ್ದರು. ಈ ಇಬ್ಬರು ಕನ್ನಡಿಗರ ಮಕ್ಕಳದ ಶಿಕ್ಷಣ ಮತ್ತು ಆರೋಗ್ಯದ ಸಂಪೂರ್ಣ ಜವಾಬ್ಧಾರಿಯನ್ನು ನಾವು ಹೊತ್ತುಕೊಳ್ಳುವುದಾಗಿ ಇಂದು ಸಂಸದ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಮಂಜುನಾಥ್ ಮತ್ತು ಪಲ್ಲವಿ ದಂಪತಿ ಪುತ್ರ ಅಭಿಜಯ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿಯಲ್ಲಿ ಶೇ.97 ರಷ್ಟು ಅಂಕ ಗಳಿಸಿದ್ದ. ಅದೇ ಖುಷಿಯಲ್ಲಿಯೇ ಅವರು ಕಾಶ್ಮೀರ ಪ್ರವಾಸ ಮಾಡಿದ್ದರು. ಆಗಲೇ ಮಂಜುನಾಥ್ ಗುಂಡಿನ ದಾಳಿಗೆ ಸಾವನ್ನಪ್ಪಿದ್ದರು. ಇದೀಗ ಮಂಜುನಾಥ್ ಪುತ್ರ ಅಭಿಜಯನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಆರ್ ವಿ ಯೂನಿವರ್ಸಿಟಿ ಕಾಲೇಜಿನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ ಪಲ್ಲವಿ ಅವರ ಪುತ್ರ ಅಭಿಜಯ ಬೆಂಗಳೂರಿಗೆ ವಿಮಾನದಲ್ಲಿ ಬರುವಾಗಲೇ ಕೇಳಿದ್ದೆ. ಆತ ಮುಂದೆ ಬಿಕಾಂ ಮಾಡಬೇಕು ಎಂದು ಹೇಳಿದ್ದ. ಅವನ ಶಿಕ್ಷಣದ ಸಂಪೂರ್ಣ ಹೊಣೆಯನ್ನು ಆರ್ ವಿ ವಿವಿ ಹೊತ್ತುಕೊಳ್ಳಲಿದೆ. ಈಗಾಗಲೇ ನಾನು ಆರ್ ವಿ ಸಂಸ್ಥೆಯವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅದಕ್ಕೆ ಅವರೂ ಶಿಕ್ಷಣದ ಜವಾಬ್ಧಾರಿ ನಮ್ಮದು ಎಂದು ಹೇಳಿದ್ದಾರೆ. ಇನ್ನು ಭರತ್ ಭೂಷಣ್ ಅವರ ಪುತ್ರ ಇನ್ನೇನು ಅವನು ಒಂದನೇ ತರಗತಿಗೆ ಸೇರಬೇಕು. ಅವನ ಶಿಕ್ಷಣದ ಜವಾಬ್ಧಾರಿಯನ್ನು ಕನಕಪುರ ರಸ್ತೆಯಲ್ಲಿರುವ ಟ್ರಾನ್ಸೆಂಡ್ ಸಿಬಿಎಸ್ ಇ ಶಾಲೆಯವರು ವಹಿಸಿಕೊಳ್ಳಲಿದ್ದಾರೆ. ಆತನ ಒಂದನೇ ತರಗತಿಯಿಂದ 12 ನೇ ತರಗತಿಯವರೆಗಿನ ಶಿಕ್ಷಣವನ್ನು ಇದೇ ಶಾಲೆಯವರು ನೋಡಿಕೊಳ್ಳಲಿದ್ದಾರೆ.
ಇನ್ನು ಈ ಎರಡೂ ಕುಟುಂಬದವರ ಸಂಪೂರ್ಣ ಆರೋಗ್ಯ ತಪಾಸಣೆ ಖರ್ಚಿನ ಹೊಣೆಯನ್ನು ಮಹಾವೀರ್ ಜೈನ್ ಆಸ್ಪತ್ರೆಯವರು ವಹಿಸಿಕೊಳ್ಳಲಿದ್ದಾರೆ. ಈ ಎರಡೂ ಕುಟುಂಬದವರ ಆರೋಗ್ಯ ಮತ್ತು ಶಿಕ್ಷಣವನ್ನು ಈ ಸಂಸ್ಥೆಗಳು ವಹಿಸಿಕೊಳ್ಳಲು ಮುಂದೆ ಬಂದಿವೆ. ಪಹಲ್ಗಾಮ್ ದಾಳಿ ವಿರೋಧಿಸಿ ಬೆಂಗಳೂರು ಕಾರ್ಯಕ್ರಮದಲ್ಲಿ ನೆರೆದಿದ್ದ ಸುಮಾರು 2000 ಜನ 10 ನಿಮಿಷದಲ್ಲಿ 20 ಲಕ್ಷ ರೂ.ಗಳಷ್ಟು ದಾನ ಮಾಡಿದ್ದಾರೆ. ಈ ಸರ್ಕಾರಕ್ಕಿಂತಲೂ ಕೂಲಿ, ನಾಲಿ ಮಾಡಿಕೊಂಡು ಬದುಕುತ್ತಿರುವ ಬೆಂಗಳೂರು ದಕ್ಷಿಣದ ಜನ ಈ ಕುಟುಂಬದವರ ಕಣ್ಣೀರು ಒರೆಸಲು ಮುಂದಾಗಿದ್ದಾರೆ. ಈಗಲಾದರೂ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಈ ಸರ್ಕಾರಕ್ಕೆ ಸ್ವಲ್ಪವಾದರೂ ಸಂವೇದನೆ ಉಳಿದುಕೊಂಡಿದ್ದರೆ ಈ ಎರಡೂ ಕುಟುಂಬಗಳಿಗೆ ಗೌರವ ಕೊಡಬೇಕು ಎನಿಸಿದ್ದರೆ ಈ ಎರಡೂ ಕುಟುಂಬಕ್ಕೂ ಸೂಕ್ತವಾದ ನ್ಯಾಯ ಕೊಡುವ ಕೆಲಸ ಮಾಡಿ ಎಂದು ಆಗ್ರಹಿಸುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.