ಬೆಂಗಳೂರು: ತಮ್ಮನ್ನು ಭೇಟಿಯಾದ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದ ಭರವಸೆಯಿತ್ತ ಸಿಎಂ ಸಿದ್ದರಾಮಯ್ಯ ನಿರ್ಧಾರದ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಯಾಗಿದ್ದ ರೇಣುಕಾಸ್ವಾಮಿ ಕುಟುಂಬಕ್ಕೆ ಈಗ ಆಧಾರವಿಲ್ಲದಂತಾಗಿದೆ. ಮನಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಪೋಷಕರು, ಗರ್ಭಿಣಿ ಪತ್ನಿ ಮತ್ತು ವಯೋವೃದ್ಧ ಅಜ್ಜಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ.
ಈಗಾಗಲೇ ಕೆಲವು ಸಂಘ-ಸಂಸ್ಥೆಗಳು ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಆರ್ಥಿಕ ನೆರವು ನೀಡಿದೆ. ನಿನ್ನೆ ರೇಣುಕಾ ತಂದೆ ಮತ್ತು ತಾಯಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ತಮ್ಮ ಪುತ್ರಿ ಅಥವಾ ಸೊಸೆಗೆ ಅನುಕಂಪದ ಆಧಾರದಲ್ಲಿ ಸರ್ಕಾರೀ ಉದ್ಯೋಗ ನೀಡಲು ಮನವಿ ಮಾಡಿದ್ದಾರೆ.
ಇದಕ್ಕೆ ಸಿದ್ದರಾಮಯ್ಯ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅಗತ್ಯ ದಾಖಲೆಗಳನ್ನು ಕಳುಹಿಸಿಕೊಡಲು ತಿಳಿಸಿದ್ದಾರೆ ಎಂದು ರೇಣುಕಾಸ್ವಾಮಿ ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸರ್ಕಾರೀ ಉದ್ಯೋಗ ನೀಡುವ ಬಗ್ಗೆ ಸಾರ್ವಜನಿಕರು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.