ಬೆಂಗಳೂರು: ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಇನ್ನು ರಾಜಯೋಗ. ನಗರದ ಬೀದಿ ನಾಯಿಗಳಿಗೆ ಬಿರಿಯಾನಿ, ಎಗ್ ರೈಸ್ ನಂತಹ ಆಹಾರ ಒದಗಿಸಲು ಬಿಬಿಎಂಪಿಯೇ ಟೆಂಡರ್ ಕರೆದಿದೆ. ಬಿಬಿಎಂಪಿಯ ಈ ಯೋಜನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡಿದ್ದು ಮುಂದೆ ಗ್ಯಾರಂಟಿ ಭಾಗ್ಯನೂ ಇರುತ್ತಾ ಎಂದು ಕಾಲೆಳೆದಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು 3 ಲಕ್ಷ ಬೀದಿ ನಾಯಿಗಳಿವೆ. ಇವುಗಳಿಗೆ ಪ್ರತಿನಿತ್ಯ ಆಹಾರ ಒದಗಿಸಲು ಮಾನವೀಯತೆಯ ದೃಷ್ಟಿಯಿಂದ ಬಿಬಿಎಂಪಿ ಯೋಜನೆ ಹಮ್ಮಿಕೊಂಡಿದೆ. ಪ್ರಾಯೋಗಿಕವಾಗಿ ಈಗಾಗಲೇ ಕೆಲವೆಡೆ ಆಹಾರ ಒದಗಿಸಿದೆಯಂತೆ.
ಇದೀಗ ನಗರದಾದ್ಯಂತ ಈ ಯೋಜನೆ ಜಾರಿಗೆ ತರಲು ಬಿಬಿಎಂಪಿ 3 ಕೋಟಿ ರೂ.ಗಳ ಟೆಂಡರ್ ಕರೆದಿದೆ. ಬೀದಿ ನಾಯಿಗಳು ಆಹಾರಕ್ಕಾಗಿ ಮನುಷ್ಯರ ಮೇಲೆ ದಾಳಿ ನಡೆಸುವುದನ್ನು ತಪ್ಪಿಸಲು ಇಂತಹದ್ದೊಂದು ಯೋಜನೆ ಹಮ್ಮಿಕೊಂಡಿರುವುದಾಗಿ ಬಿಬಿಎಂಪಿ ಹೇಳಿದೆ.
ಆದರೆ ಬಿಬಿಎಂಪಿಯ ಈ ಯೋಜನೆಯನ್ನು ಕೆಲವರು ವ್ಯಂಗ್ಯ ಮಾಡಿದ್ದಾರೆ. ಮುಂದೆ ನಾಯಿಗಳಿಗೆ ಶಾದಿ ಭಾಗ್ಯ, ಕರೆಂಟ್ ಫ್ರೀ, ಬಸ್ ಫ್ರೀ ಯೋಜನೆಯನ್ನೂ ಮಾಡ್ತೀರಾ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಬಿರಿಯಾನಿ ಸಿಗ್ಲಿಲ್ಲ ಎಂದರೆ ಮುಂದೊಂದು ದಿನ ಬಿಬಿಎಂಪಿ ಕಚೇರಿ ಎದುರು ಬೀದಿ ನಾಯಿಗಳೆಲ್ಲಾ ಸ್ಟ್ರೈಕ್ ಮಾಡಬೇಕಾದೀತು ಎಂದು ವ್ಯಂಗ್ಯ ಮಾಡಿದ್ದಾರೆ.