ಬೆಂಗಳೂರು: ಬೆಂಗಳೂರಿನ ಸೌಲಭ್ಯಗಳನ್ನು ಬಳಸಿ ಬೆಳೆದವರು ಇಂದು ಬೆಂಗಳೂರಿನ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುವ ಮೂಲಕ ಟೀಕೆಗಾರರಿಗೆ ಪರೋಕ್ಷವಾಗಿ ಕೌಂಟರ್ ನೀಡಿದರು.
ಬೆಂಗಳೂರಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಗಳೂರು ನಡಿಗೆ: ಅಭಿಯಾನದಲ್ಲಿ ನಾಗರಿಕರೊಂದಿಗೆ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ಬೆಂಗಳೂರಿಗೆ ಬಂದು ಬೆಳೆದಿರುವವರು ಈ ಹಿಂದೆ ಹೇಗಿದ್ದರು, ಪ್ರಸ್ತುತ ಹೇಗಿದ್ದಾರೆ ಎಂಬುದನ್ನಲ್ಲೆ ಮರೆತು ಇದೀಗ ಟ್ವೀಟ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬಂದಿರುವ ಮೂಲವನ್ನು ಮರೆಯಬಾರದು ಎಂದು ಹೆಸರು ಹೇಳದೇ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ದೇಶದಲ್ಲಿಯೇ ಮೊದಲ ಬಾರಿಗೆ ನಗರದಾದ್ಯಂತ ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂಬುದನ್ನು ಸಾರ್ವಜನಿಕರೇ ಫೋಟೊ ತೆಗೆದು ಅದನ್ನು ಮೊಬೈಲ್ ಆ್ಯಪ್ ಮೂಲಕ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆಯನ್ನು ಮಾಡಿದ್ದೇವೆ. ನಾನು ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇನೆ. ಟೀಕೆಗಳು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಆದರೆ ಕೆಲವರು ವಿಕೋಪಕ್ಕೆ ಹೋಗಿ ಟೀಕೆ ಮಾಡುತ್ತಿದ್ದಾರೆ. ಅಂತಹವರ ಟೀಕೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ನಮಗೆ ಅವಕಾಶ ನೀಡಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.