ಕೋವಿಡ್‌ಗೆ ನಾವೆಲ್ಲ ಹೆದರಬೇಕಾಗಿಲ್ಲ. ಮಾರ್ಚ್ ಎಪ್ರಿಲ್ ವರೆಗೆ ಮಾತ್ರ ಇರುತ್ತದೆ. ಒಂದು ಮಟ್ಟಕ್ಕೆ ತಲುಪಿದ ನಂತರ ಅದರ ಸಂಖ್ಯೆ ಇಳಿಮುಖವಾಗುತ್ತದೆ. ಲಾಕ್‌ಡೌನ್‌ನಿಂದ ಒಮ್ಮೇಗೆ ಕೊರೋನ ಸಂಖ್ಯೆ ಏರಿಕೆಯಾಗುವುದನ್ನು ಕಡಿಮೆ ಮಾಡುತ್ತದೆ. ಆದರೆ ಲಾಕ್‌ಡೌನ್ ಮಾಡುವುದು ಬೇಡ ಹಾಗೂ ಆ ಬಗ್ಗೆ ನಮಗೆ ಯಾರಿಗೂ ಒಲವು ಇಲ್ಲ. ಲಾಕ್‌ಡೌನ್, ನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನ ಕೂಡ ಇಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ವಿದ್ಯಾರ್ಥಿಗಳ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೈಟ್ ಕರ್ಫ್ಯೂ ಈಗ ಅವಶ್ಯಕತೆ ಇಲ್ಲ. ಹೊಸ ವರ್ಷ ಆಚರಣೆಯಲ್ಲಿ ಗೊಂದಲ ಆಗಬಹುದೆಂಬ ಉದ್ದೇಶದಿಂದ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ನೈಟ್ ಕರ್ಫ್ಯೂನಿಂದ ಕೊರೋನ ತಡೆಯುತ್ತದೆ ಎಂಬುದನ್ನು ನಾನು ಒಪ್ಪಲ್ಲ ಎಂದು ಹೇಳಿದರು.
ನೈಟ್ ಕರ್ಫ್ಯೂ ಇದ್ದರೆ ಜನರಿಗೆ ಕೊರೋನ ಈಗಲೂ ಇದೆ ಎಂಬುದು ಅರ್ಥ ಆಗುತ್ತದೆ. ಇಲ್ಲದಿದ್ದರೆ ಕೊರೋನವೇ ಇಲ್ಲ ಎಂದು ಹೇಳಿ ಮಾಸ್ಕ್ ಹಾಕದೆ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತಾರೆ. ಜನರಿಗೆ ಎಚ್ಚರಿಕೆ ಇರಲಿ ಎಂಬ ಕಾರಣಕ್ಕೆ ತಜ್ಞರು ಇಂತಹ ಕ್ರಮಗಳ ಬಗ್ಗೆ ನಿರ್ದೇಶನ ನೀಡುತ್ತಿದ್ದಾರೆ. ನನ್ನ ಪ್ರಕಾರ ಸರಕಾರ ಮುಂದೆ ಲಾಕ್ ಡೌನ್ ಮಾಡಲಿಕ್ಕೆ ಇಲ್ಲ. ಕೊರೋನ ಸಂಖ್ಯೆ ತುಂಬಾ ಜಾಸ್ತಿಯಾದರೆ ಮಾಡಬಹುದು. ಆದರೆ ನನ್ನ ಅಭಿಪ್ರಾಯ ಲಾಕ್ ಡೌನ್ ಮಾಡುವುದು ಬೇಡ ಎಂದರು.