ಶನಿವಾರ-ಭಾನುವಾರ ವಾರಾಂತ್ಯದ ಲಾಕ್‍ಡೌನ್, ಈಗಿರುವ ಕಫ್ರ್ಯೂ ಸಮಯವನ್ನು ವಿಸ್ತರಿಸುವುದು ಹಾಗೂ ರಾಜ್ಯದ ಗಡಿಭಾಗಗಳಲ್ಲಿ ಹೆಚ್ಚಿನ ಬಿಗಿ ಕ್ರಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕದೆ ಒಂದಿಷ್ಟು ಕಠಿಣ ನಿಯಮಗಳನ್ನು ರೂಪಿಸುವುದು ಸೇರಿದಂತೆ ಎಲ್ಲಾ ಸಾಧ್ಯ ಸಾಧ್ಯತೆಗಳನ್ನು ಸರ್ಕಾರ ಮುಕ್ತವಾಗಿಟ್ಟುಕೊಂಡಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಕಾರಿಗಳು ಸೇರಿದಂತೆ ಮತ್ತಿತರರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳು ಏರುಮುಖವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಸಂಭವವಿದೆ. ಇಂದು ಯಾವುದೇ ಕಠಿಣ ನಿರ್ಧಾರ ಸರ್ಕಾರದಿಂದ ಪ್ರಕಟವಾಗದಿದ್ದರೂ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತನ್ನ ತೀರ್ಮಾನವನ್ನು ಪ್ರಕಟಿಸಲಿದೆ.