ದುಡ್ಡಿಲ್ಲ, ಶಿಕ್ಷಕರಿಗೆ ಸಂಬಳವೇ ಆಗಿಲ್ಲ: ಬಿವೈ ವಿಜಯೇಂದ್ರ

Krishnaveni K

ಮಂಗಳವಾರ, 18 ಫೆಬ್ರವರಿ 2025 (20:35 IST)
ಬೆಂಗಳೂರು: ಮಕ್ಕಳ ಭವಿಷ್ಯ ರೂಪಿಸಬೇಕಾದ ರಾಜ್ಯ ಸರಕಾರವು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಚೆಲ್ಲಾಟ ಆಡುತ್ತಿದೆ; ಇದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಖಂಡಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದವರು ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಈ ಸ್ಥಳಕ್ಕೆ ಅವರು, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಜೊತೆ ಭೇಟಿ ನೀಡಿ ಹೋರಾಟದಲ್ಲಿ ಪಾಲ್ಗೊಂಡರು.
 
ಇದೇವೇಳೆ ಶಿಕ್ಷಕರ ಬೇಡಿಕೆ ಕುರಿತು ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಿಗೆ 300 ಕೋಟಿಯಿಂದ 400 ಕೋಟಿ ರೂ. ಅನುದಾನ ನೀಡಬೇಕಿದೆ. ಆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಹಿಂದಿನ ಸರಕಾರದ ಮೇಲೆ ಗೂಬೆ ಕೂರಿಸಿ ಆ ವಿವಿಗಳನ್ನು ಮುಚ್ಚಿಸಲು ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಟೀಕಿಸಿದರು.

ರಾಜ್ಯ ಸರಕಾರವು ಅತಿಥಿ ಶಿಕ್ಷಕರ ವಿಚಾರದಲ್ಲಿ ಮಾನವೀಯತೆಯಿಂದ ನಡೆದುಕೊಳ್ಳಬೇಕಿತ್ತು ಎಂದು ಅವರು ತಿಳಿಸಿದರು. ಅತಿಥಿ ಶಿಕ್ಷಕರ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಲು ತಾವು ಛಲವಾದಿ ನಾರಾಯಣಸ್ವಾಮಿ ಅವರ ಜೊತೆ ಇಲ್ಲಿ ಬಂದಿರುವುದಾಗಿ ತಿಳಿಸಿದರು. ತಮ್ಮೆಲ್ಲರ ಧ್ವನಿಯಾಗಿ ಆಡಳಿತ ಪಕ್ಷಕ್ಕೆ ಕಿವಿ ಹಿಂಡುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಹಿಂದೆ 5 ಸಾವಿರ ಇದ್ದ ಗೌರವಧನವನ್ನು 2,500 ರೂ. ಹೆಚ್ಚಿಸಿ 7500 ಕೊಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿತ್ತು. ಬಳಿಕ ಅದನ್ನು 10 ಸಾವಿರಕ್ಕೆ ಬಿಜೆಪಿ ಸರಕಾರ ಏರಿಸಿದ್ದನ್ನು ತಾವು ತಮ್ಮ ಕರಪತ್ರದಲ್ಲಿ ಪ್ರಸ್ತಾಪಿಸಿದ್ದೀರಿ. ಅತಿಥಿ ಶಿಕ್ಷಕರು ನಾಡಿನ ಭವಿಷ್ಯ ರೂಪಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕನಿಷ್ಠ ಬೇಡಿಕೆಗಳಿಗಾದರೂ ಸ್ಪಂದಿಸುವುದು ಸರಕಾರದ ಕರ್ತವ್ಯ ಎಂದು ನುಡಿದರು.
 
ಗರ್ಭಿಣಿ ಮಹಿಳಾ ಶಿಕ್ಷಕಿಗೆ ಗೌರವ ಸಂಪಾದನೆ ಸಹಿತ ರಜೆ ಕೊಡಬೇಕು ಎಂಬುದೂ ಸೇರಿ ಕನಿಷ್ಠ ಬೇಡಿಕೆಗಳಿಗಾಗಿ ಒತ್ತಾಯ ಮಾಡುತ್ತಿದ್ದೀರಿ. ರಜೆ ಕೊಡದೆ ಇದ್ದಲ್ಲಿ ಗರ್ಭಿಣಿ ಶಿಕ್ಷಕಿ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
 
ಸಿಎಂ, ಶಿಕ್ಷಣ ಸಚಿವ, ಮುಖ್ಯ ಕಾರ್ಯದರ್ಶಿಗೆ ಪತ್ರ- ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡುವ ನಿಮ್ಮ ವೇತನ ಹೆಚ್ಚಳದ ಬೇಡಿಕೆ ಸರಿ ಇದೆ. ನಿಮ್ಮ ಬೇಡಿಕೆಗಳಿಗೆ ಸಹಮತ ಇದೆ ಎಂದು ತಿಳಿಸಿದರು. ಇದರ ಕುರಿತು ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ. ಸದನದಲ್ಲೂ ಪ್ರಸ್ತಾಪಿಸಿ ಹೋರಾಟ ಮಾಡುವುದಾಗಿ ತಿಳಿಸಿದರು. 

ಡಾಟಾ ಎಂಟ್ರಿ ಆಪರೇಟರ್‍ಗಳಿಗೆ 7-8 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಅವರು ನನ್ನ ಕಚೇರಿಗೆ ಬಂದಿದ್ದರು ಎಂದು ಗಮನ ಸೆಳೆದರು. ಸರಕಾರದಲ್ಲಿ ದೊಡ್ಡ ತಿಮಿಂಗಿಲಗಳು ಸೇರಿಕೊಂಡಿವೆ. ಎಲ್ಲಿ ಸೋರಿಕೆ ಆಗುತ್ತಿದೆಯೋ ಗೊತ್ತಿಲ್ಲ ಎಂದು ಹೇಳಿದರು.
 
 
   
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ