Bengaluru Water crisis: ನನ್ನ ಮನೆಯಲ್ಲೂ ನೀರಿಲ್ಲ ಏನ್ಮಾಡೋಣ: ಡಿಕೆ ಶಿವಕುಮಾರ್

Krishnaveni K

ಬುಧವಾರ, 6 ಮಾರ್ಚ್ 2024 (14:17 IST)
Photo Courtesy: Twitter
ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಬವಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿ ಇತ್ತೀಚೆಗಿನ ಕೆಲವು ವರ್ಷಗಳಲ್ಲೇ ಕಂಡುಬಂದಿಲ್ಲ ಎಂದು ಜನರೇ ಹೇಳುತ್ತಿದ್ದಾರೆ.

ಕೊಳವೆ ಬಾವಿ, ಬಾವಿ ಬತ್ತಿ ಹೋಗಿದ್ದು, ಕಾವೇರಿ ನೀರೂ ವಿರಳವಾಗಿದೆ. ಹೀಗಾಗಿ ಜನರು ಟ್ಯಾಂಕರ್ ಗಳ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಟ್ಯಾಂಕರ್ ಗಳು ಓಡಾಡುತ್ತಿದೆ. ಟ್ಯಾಂಕರ್ ಗಳಿಗೂ ಈಗೀಗ ನೀರು ಸಿಗುವುದೇ ಕಷ್ಟ ಎಂಬ ಪರಿಸ್ಥಿತಿಯಾಗಿದೆ.

ಮೊದಲೆಲ್ಲಾ ಪ್ರತೀ ಲೋಡ್ ಗೆ 500 ರೂ. ಹೇಳುತ್ತಿದ್ದ ಟ್ಯಾಂಕರ್ ಗಳು ಈಗ 15,000 ರಿಂದ 2000 ರೂ.ವರೆಗೆ ವಸೂಲಿ ಮಾಡುತ್ತಿವೆ. ದಿನಕ್ಕೆ 100 ಆರ್ಡರ್ ಬರುತ್ತಿದೆ. ನಮಗೆ 20 ಟ್ಯಾಂಕರ್ ನೀರು ಸಿಕ್ಕರೆ ಹೆಚ್ಚು ಏನು ಮಾಡೋದು ಎಂದು ಟ್ಯಾಂಕರ್ ಮಾಲಿಕರೇ ಕೈಚೆಲ್ಲುತ್ತಿದ್ದಾರೆ.

ಬಿರು ಬೇಸಿಗೆಯಲ್ಲಿ ನೀರಿಲ್ಲದೇ ಜನ ಪರದಾಡುವಂತಾಗಿದೆ. ಈ ಬಗ್ಗೆ ಜನನಾಯಕರನ್ನು ಕೇಳಿದರೆ ಬೋರ್ ಹಾಕಿಸಿಕೊಡೋಣ. ನೀರು ಬರದೇ ಇದ್ದರೆ ಏನು ಮಾಡೋದು ಎಂದು ಮರು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನ ಕೆಲವೆಡೆ ಇನ್ನೂ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲೆಲ್ಲಾ ಪರಿಸ್ಥಿತಿ ಶೋಚನೀಯವಾಗಿದೆ.

ಬೆಂಗಳೂರಿನ ನೀರಿನ ಬವಣೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ತಮ್ಮ ಅಸಹಾಯಕ ಸ್ಥಿತಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ಕಡೆ ಈಗ ನೀರಿಗೆ ಬರಗಾಲ ಎದುರಾಗಿದೆ. ನಮ್ಮ ಮನೆಯ ಕೊಳವೆ ಬಾವಿಯೂ ಬತ್ತಿ ಹೋಗಿದೆ. ಏನು ಮಾಡೋದು ಎಂದಿದ್ದಾರೆ. ಇತ್ತೀಚೆಗಷ್ಟೇ ನೀರಿನ ಬವಣೆ ತಪ್ಪಿಸಲು ವ್ಯವಸ್ಥೆ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಭೂಮಿಯಲ್ಲೇ ನೀರಿಲ್ಲದೇ ಇರುವಾಗ ಯಾವ ಯೋಜನೆಗಳಿಂದ ಏನು ಪ್ರಯೋಜನ. ಅಂತೂ ಬೆಂಗಳೂರು ನೀರಿನ ಕಷ್ಟ ದೇಶದಾದ್ಯಂತ ಸುದ್ದಿಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ