ಡಿಕೆಶಿಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ

geetha

ಮಂಗಳವಾರ, 5 ಮಾರ್ಚ್ 2024 (18:21 IST)
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಿಹಿಸುದ್ದಿ ಸಿಕ್ಕಿದೆ. ಅಕ್ರಮ ಆಸ್ತಿ ಗಳಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ದ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌, ಇಡಿ ದಾಖಲಿಸಿದ್ದ 120 ಬಿ  ತನಿಖೆಯಿಂದ ಡಿ.ಕೆ. ಶಿವಕುಮಾರ್‌ ಅವರನ್ನು ಮುಕ್ತಗೊಳಿಸಿದೆ. 
 
2017 ರಲ್ಲಿ ಡಿ.ಕೆ. ಶಿವಕುಮಾರ್‌ ಅವರ ಮೇಲೆ ದಾಳಿ ನಡೆಸಿದ್ದ ಇ.ಡಿ ಕೋಟ್ಯಂತರ ರೂ. ಹಣವನ್ನು ವಶಪಡಿಸಿಕೊಂಡಿತ್ತು. ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ 14 ತಿಂಗಳು ಸೆರೆವಾಸವನ್ನೂ ಅನುಭವಿಸಿದ್ದರು. ಜಾರಿ ನಿರ್ದೇಶನಾಲಯದ ತನಿಖೆಯಿಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ಗೆ ಕೊಂಚ ರಿಲೀಫ್ ಸಿಕ್ಕಿದೆ. ಆದರೆ. ಇದು ಸಿಬಿಐ ತನಿಖೆ ಮೇಲೆ ಪರಿಣಾಮವಿಲ್ಲ. ಐಟಿ, ಇಡಿ ನೀಡಿದ್ದ ಮಾಹಿತಿ ಆಧರಿಸಿ ಸಿಬಿಐ ನಡೆಸುತ್ತಿರುವ ತನಿಖೆ ಇನ್ನೂ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ.
 
ಐಟಿ, ಇಡಿ ನೀಡಿದ್ದ ಮಾಹಿತಿ ಆಧರಿಸಿ ಸಿಬಿಐ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ. ಸಿಬಿಐ ತನಿಖೆಗೆ ಸಮ್ಮತಿ ರದ್ದುಪಡಿಸಿದ ಕ್ರಮವನ್ನು ಸಿಬಿಐ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆ ಹಂತದಲ್ಲಿದೆ. ಹೀಗಾಗಿ ಹೈಕೋರ್ಟ್ ನೀಡುವ ತೀರ್ಪು ಡಿಕೆ ಶಿವಕುಮಾರ್ ಪಾಲಿಗೆ ಮಹತ್ವದ್ದಾಗಿದೆ.
 
ಇನ್ನು ಸಿಬಿಐ ಅಲ್ಲದೇ ದೆಹಲಿಯ ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿ 8.59 ಕೋಟಿ ಲೆಕ್ಕವಿಲ್ಲದ ಹಣ ಸಂಗ್ರಹಕ್ಕೆ ಸಂಬಂಧಿಸಿದಂತೆಯೂ ಪ್ರಕರಣ ವಿಚಾರಣೆ ಹಂತದಲ್ಲಿದೆ. ಸದ್ಯ ಡಿಕೆ ಶಿವಕುಮಾರ್ ಪಾಲಿಗೆ ಸಿಬಿಐ ದಾಖಲಿಸಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವೇ ಮಹತ್ವದ್ದಾಗಿದ್ದು, ಬಂಧನ ಸಾಧ್ಯತೆ ಇರುವ ಪ್ರಕರಣವೂ ಇದೇ ಆಗಿದೆ. ಸಿಬಿಐ ತನಿಖೆಗೆ ಸಮ್ಮತಿ ಹಿಂಪಡೆಯುವ ಮೂಲಕ ಸಿಬಿಐ ಕಟ್ಟಿಹಾಕಲು ಸದ್ಯಕ್ಕೆ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಆದರೆ ಹೈಕೋರ್ಟ್ ನೀಡಬಹುದಾದ ತೀರ್ಪು ಡಿಕೆ ಶಿವಕುಮಾರ್ ಭವಿಷ್ಯ ನಿರ್ಧರಿಸಲಿದೆ.
 
ಶಿವಕುಮಾರ್ ವಿರುದ್ಧ ಸಿಬಿಐ 2020 ರಲ್ಲಿ ಪ್ರಕರಣ ದಾಖಲಿಸಿತ್ತು. 2013 ಮತ್ತು 2018 ರ ನಡುವೆ 74 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಅದು ಆದಾಯಕ್ಕೆ ಅನುಗುಣವಾಗಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರಕಾರ ಹಿಂಪಡೆದುಕೊಂಡಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್‌ ಈ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ