ಹಳೇ BMTC ಬಸ್‌ಗಳು ಬೆಳಗಾವಿಗೆ
ಬೆಂಗಳೂರಿನಲ್ಲಿ ಈಗಾಗಲೇ ನೂತನವಾಗಿ ತಯಾರಾದ ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳನ್ನು ಬಿಡಲಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿಗೆ ನೂತನ ಆವಿಷ್ಕಾರದ ಬಸ್‌ಗಳು ಬರುತ್ತಲೇ ಇವೆ. ಆದರೆ ಹಳೆ ಬಸ್‌ಗಳು ಕೂಡ ಗುಜರಿ ಹಂತಕ್ಕೆ ತಲುಪಿದ್ದು, ಈ ಹಳೆ ಬಸ್‌ಗಳನ್ನು ಏನು ಮಾಡುತ್ತಾರೆ ಎನ್ನುವುದೇ ಜನಸಾಮಾನ್ಯರನ್ನ ಕಾಡುವ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಸಾರಿಗೆ ಇಲಾಖೆ ಹಳ್ಳ ಹಿಡಿದ ಬಿಎಂಟಿಸಿ ಬಸ್‌ಗಳನ್ನು ಹುಬ್ಬಳ್ಳಿ ಮತ್ತು ಬೆಳಗಾವಿ ವಿಭಾಗಗಳಿಗೆ ಬಿಡಲು ನಿರ್ಧರಿಸಿದೆ. ಈ ನಿರ್ಧಾರವು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರಿದಂತೆ ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಬೆಂಗಳೂರಿಗೆ ಬೆಣ್ಣೆ, ಬೆಳಗಾವಿಗೆ ಸುಣ್ಣ ಎಂಬ ನಡೆಯನ್ನು ಈಗಿನ ರಾಜ್ಯ ಸರ್ಕಾರ ಮಾಡುತ್ತಿದೆ. ಬೆಂಗಳೂರಿನಲ್ಲಿ ಓಡಿಸಿದ ಬಿಎಂಟಿಸಿ ಹಳೆಯ ಬಸ್‌ಗಳನ್ನೇ ಹುಬ್ಬಳ್ಳಿ, ಬೆಳಗಾವಿಗೆ ರವಾನಿಸಿದ್ದು, (NWKSRTC) ಹುಬ್ಬಳ್ಳಿ, ಬೆಳಗಾವಿ ವಿಭಾಗಕ್ಕೆ ತಲಾ 50 ಹಳೇ ಬಿಎಂಟಿಸಿ ಬಸ್‌ಗಳನ್ನು ಸಾರಿಗೆ ಇಲಾಖೆ ನೀಡಿದೆ. ಬೆಂಗಳೂರಿನಲ್ಲಿರುವ ಬಿಎಂಟಿಸಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೂತನ ಬಸ್‌ಗಳನ್ನು ಖರೀದಿಸಿದ್ದಾರೆ. ಆದರೆ ಬಿಎಂಟಿಸಿಯ ಹಳ್ಳ ಹಿಡಿದ ಬಸ್‌ಗಳನ್ನು ಕುಂದಾನಗರಿ ಬೆಳಗಾವಿ, ಅವಳಿ ನಗರ ಹುಬ್ಬಳ್ಳಿ ಜಿಲ್ಲೆಗೆ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಂತಿದೆ.