ಪ್ಯಾಸೆಂಜರ್ ರೈಲು ಸಂಚಾರ ಆರಂಭ
ಒಡಿಶಾದ ಬಾಲಸೋರ್‌ನಲ್ಲಿ ತ್ರಿವಳಿ ರೈಲು ಅಪಘಾತದಿಂದ ಹಾನಿಗೊಳಗಾಗಿದ್ದ ಹಳಿಯನ್ನು ದುರಸ್ತಿ ಮಾಡಲಾಗಿದ್ದು, ಪ್ಯಾಸೆಂಜರ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ. ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ಬೇಗ ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ ಮೂಲಕ ತಿಳಿಸಿದ್ದರು. ಅದರಂತೆ, ಬೆಂಗಳೂರು ಹೌರಾ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾದ ಮಾರ್ಗದಲ್ಲಿ ಭಾನುವಾರ ರಾತ್ರಿ 10.40ಗಂಟೆಗೆ ವಿಶಾಖಪಟ್ಟಣದ ಬಂದರಿನಿಂದ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನತ್ತ ಸಂಚರಿಸಿತ್ತು. ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲು ಇದಾಗಿತ್ತು. ಇಂದು ಬೆಳಿಗ್ಗೆ ಪ್ಯಾಸೆಂಜರ್ ರೈಲು ಸಹ ಸಂಚರಿಸಿದೆ.. ಅಪಘಾತದಲ್ಲಿ ಒಟ್ಟು 275 ಮಂದಿ ಮೃತಪಟ್ಟಿದ್ದು, 200 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಡಿಎನ್‌ಎ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.