ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸುತ್ತಿರು ಜನರು…
ಸೋಮವಾರ, 23 ಜುಲೈ 2018 (16:36 IST)
ಅವರೆಲ್ಲ ಮಳೆಬಂದರೆ ಸಾಕು ಜೀವ ಅಂಗೈಯಲ್ಲಿ ಹಿಡಿದುಕೊಂಡು ನದಿ ದಾಟಬೇಕು. ಏನಾದರೂ ಒಂದು ಕ್ಷಣ ಎಚ್ಚರಿಕೆ ಇಲ್ಲದಿದ್ದರೆ ಆವರು ನಿಜಕ್ಕೂ ಜಲಸಮಾಧಿ. ಹೀಗೆ ಒಂದಲ್ಲ, ಎರಡಲ್ಲ, ಹತ್ತು ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ಅಲ್ಲಿನ ಜನರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಸಮೀಪದ ಮಳಗಿ ಗ್ರಾಮದ ಜನರು ಏನಾದರೂ ದಿನನಿತ್ಯದ ವಸ್ತುಗಳನ್ನು ತರಬೇಕಾದರೆ ರಟ್ಟಿಹಳ್ಳಿಗೆ ಬರಬೇಕು. ಅಲ್ಲದೆ ಈ ಗ್ರಾಮದಲ್ಲಿ 5ನೇ ತರಗತಿಯ ವರೆಗೆ ಮಾತ್ರ ಶಾಲೆ ಇದೆ. ಮುಂದಿನ ವಿಧ್ಯಾಭ್ಯಾಸ ಮಾಡಲು ರಟ್ಟಿಹಳ್ಳಿಗೆ ಬರಬೇಕು. ರಟ್ಟಿಹಳ್ಳಿ ನಡುವೆ ಕುಮದ್ವತಿ ನದಿ ಇದೆ. ಮಳೆಬಂದಾಗ ಅದು ತುಂಬಿ ಹರಿಯುತ್ತದೆ. ಮಳಗಿ ಗ್ರಾಮದಿಂದ ಜನರು, ವಿದ್ಯಾರ್ಥಿಗಳು ಕುಮದ್ವತಿ ನದಿ ದಾಟಿ ಹೋಗಬೇಕು. ಈ ಗ್ರಾಮದ ಜನಕ್ಕೆ ಓಡಾಡುವ ಸಲುವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆ ನಿರ್ಮಾಣ ಮಾಡಿ ನಾಲ್ಕು ವರ್ಷವಾಗಿದೆ. ಸೇತುವೆಯ ಮುಂದೆ ಹಿಂದೆ ರಸ್ತೆ ಮಾಡಿಲ್ಲ. ಅದಕ್ಕಾಗಿ ನೀರನ್ನ ದಾಟಿ ಹೋಗಬೇಕಾದ ಪರಿಸ್ಥಿತಿ ಇದೆ.
ಸೇತುವೆ ನೆಪಮಾತ್ರಕ್ಕೆ ಇದೆ. ಸೇತುವೆ ಸಮನಾಗಿ ರಸ್ತೆ ಮಾಡುವುದಕ್ಕೆ ಕಳೆದ ನಾಲ್ಕು ವರ್ಷಗಳಿಂದ ಆಗಿಲ್ಲ. ಇದರಿಂದ ಮಗಳಿ ಗ್ರಾಮದ ಜನರು ಲೋಕಪಯೋಗಿ ಇಲಾಖೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮಳೆ ಬಂದರೆ ಕುಮುದ್ವತಿ ನದಿ ತುಂಬಿ ಹರಿಯುತ್ತದೆ. ಇದರಿಂದ ಶಾಲೆಗೆ ಹೊಗುವ ಮಕ್ಕಳು ರಜೆ ಹಾಕಿ ಮನೆಯಲ್ಲಿ ಇರುವಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಶಾಲಾ ಶಿಕ್ಷಕಿಯರು.
ಪ್ರತಿನಿತ್ಯ ತೆಪ್ಪದ ಮೂಲಕ ಇಲ್ಲಿನ ಜನರು, ವಿದ್ಯಾರ್ಥಿಗಳು, ಜೀವ ಭಯದಿಂದ ಓಡಾಡುವಂತಾಗಿದೆ. ಸೇತುವೆ ಇದ್ದು ಕೆಲಸಕ್ಕೆ ಬಾರದಂತಾಗಿದೆ. ಒಟ್ಟಾರೆ ಈ ಮಗಳಿ ಗ್ರಾಮಕ್ಕೆ ಸರಿಯಾದ ರೀತಿಯಲ್ಲಿ ರಸ್ತೆ ಮಾಡಿ, ವಿದ್ಯಾರ್ಥಿಗಳು, ಜನರನ್ನ ಜೀವ ಭಯದಿಂದ ಮತ್ತು ನೆಮ್ಮದಿಯಿಂದ ಜೀವನ ನಡೆಸುವುದಕ್ಕೆ ಇಲ್ಲಿ ಅಧಿಕಾರಿಗಳು, ಜನ ಪ್ರತಿನಿಧಿಗಳು ಕ್ರಮ ಕೈಗೋಳಬೇಕಿದೆ.