ಕಾಳು ಮೆಣಸಿನ ಬಂಪರ್ ಬೆಲೆ! ಎಷ್ಟಿದೆ?
ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದು ಪ್ರಸಿದ್ಧವಾದ ಕಾಳು ಮೆಣಸಿನ ಬೆಲೆ ಈಗ ಏರಿಕೆಯ ಹಾದಿಯಲ್ಲಿದೆ.
ಆದರೆ ಇದರ ಲಾಭ ಹೆಚ್ಚಿನ ಬೆಳೆಗಾರರಿಗೆ ದಕ್ಕದಂತಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಏಕಾ ಏಕಿ ಕುಸಿತ ಕಂಡಿದ್ದ ದರ ಅಂತೂ ಈಗ ಚೇತರಿಕೆ ಕಂಡಿದೆ. ಅಂದಿನ ದರಕ್ಕೆ ಹೋಲಿಸಿದರೆ ಈಗ ದುಪ್ಪಟ್ಟು ದರ ದಾಖಲಾಗಿದೆ.
ಕಾಳುಮೆಣಸಿನ ಪ್ರಮುಖ ಮಾರುಕಟ್ಟೆಯಾದ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಗರಿಷ್ಠ ದರ ಕ್ವಿಂಟಾಲ್ ಗೆ 60 ಸಾವಿರ ರೂ. ಗಳನ್ನು ಮೀರಿದೆ. ಸರಾಸರಿ 54 ಸಾವಿರ ರೂ. ಲಭ್ಯವಾಗುತ್ತಿದೆ. ಇದೇ ದರ 4 ವರ್ಷಗಳ ಹಿಂದೆ ಸಾಕಷ್ಟು ಬೆಳೆಗಾರರಿಗೆ ಲಭ್ಯವಾಗಿತ್ತು. ಅದರಲ್ಲೂ ವರ್ಷಗಟ್ಟಲೇ ಕಾಲ ಈ ದರ ಮುಂದುವರೆದಿತ್ತು.
ಆದರೆ ನಂತರ ಕುಸಿಯುತ್ತ ಬಂದು 2019.ರಲ್ಲಿ ಕ್ವಿಂಟಾಲ್ಗೆ 30 ಸಾವಿರ ರೂ. ಗಳಿಗಿಂತ ಕಡಿಮೆ ದಾಖಲಾಗಿ ಬೆಳೆಗಾರರು ನಿರಾಸೆ ಪಡುವಂತಾಗಿತ್ತು. ನಂತರದಲ್ಲಿ 30- 40 ಸಾವಿರ ರೂಗಳ ಮಧ್ಯದಲ್ಲಿ ಮಾರುಕಟ್ಟೆಯಲ್ಲಿ ಕಾಳು ಮೆಣಸು ವಿಕ್ರಿ ಆಗುತ್ತಿತ್ತು. ಮತ್ತೆ ದರ ಏರಿಕೆ ಆಗುತ್ತದೆಂದು ಕಾಯಲಾಗದ ಬೆಳೆಗಾರರು ಕಾಳುಮೆಣಸು ಮಾರುಕಟ್ಟೆಗೆ ಒಯ್ದು ಕೊಟ್ಟಿದ್ದಾರೆ. ಆದರೆ ಈಗ ಮೂರು ವಾರಗಳ ಹಿಂದಿನಿಂದ ದರ ಒಂದೇ ಸಮನೆ ಏರಿಕೆಯಾಗುತ್ತಿದೆ.