ಬೀದರ್-ಕಲಬುರಗಿ ರೈಲ್ವೆ ಮಾರ್ಗ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ: ಖೂಬಾ

ಶುಕ್ರವಾರ, 17 ಜೂನ್ 2016 (15:10 IST)
ಬೀದರ್-ಕಲಬುರಗಿ ರೈಲ್ವೆ ಮಾರ್ಗ 2017ರ ಏಪ್ರಿಲ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ರೈಲ್ವೆ ಮಾರ್ಗ ಉಧ್ಘಾಟನೆಗಾಗಿ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಸಂಸದ ಭಗವಂತ್ ಖೂಬಾ ಹೇಳಿದ್ದಾರೆ. 
 
ಖಾನಾಪುರದಿಂದ ಮರಗುತ್ತಿಯವರೆಗೆ ರೈಲ್ವೆ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 1999ರಿಂದ ನೆನೆಗುದಿಯಲ್ಲಿದ್ದ ಬೀದರ್-ಕಲಬುರಗಿ ರೈಲ್ವೆ ಲೈನ್ ಏಪ್ರಿಲ್ ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದರು. 
 
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅರ್ಧದಷ್ಟು ಹಣವನ್ನು ಸರಕಾರದಿಂದ ನೀಡಿದ್ದರೆ, ಅಂದಿನ ರೈಲ್ವೆ ಖಾತೆ ಸಚಿವ ಬಸವನಗೌಡ ಪಾಟೀಲ್ ಯಾತ್ನಾಳ್ ಯೋಜನೆಗೆ ಮೊದಲ ಆದ್ಯತೆ ನೀಡಿದ್ದರು ಎಂದು ಸಂತಸ ವ್ಯಕ್ತಪಡಿಸಿದರು.  
 
ದಕ್ಷಿಣ ಮಧ್ಯೆ ರೈಲ್ವೆ ವಿಭಾಗದ ಮುಖ್ಯ ಇಂಜಿನಿಯರ್ ಟಿ.ಪಿ.ನಾರಾಯಣ್‌ರಾವ್ ಮಾತನಾಡಿ, ಬೀದರ್-ಕಲಬುರಗಿ ರೈಲ್ವೆ ಮಾರ್ಗ 1500 ಕೋಟಿ ರೂಪಾಯಿಗಳ ಯೋಜನೆಯಾಗಿದ್ದು, ಡಿಸೆಂಬರ್ ವೇಳೆಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಜನೆವರಿಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದ್ದು ಏಪ್ರಿಲ್ ವೇಳೆಗೆ ರೈಲು ಸಂಚಾರ ಆರಂಭವಾಗಲಿದೆ ಎಂದರು. 
 
110.4 ಕಿ.ಮೀ ರೈಲ್ವೆ ಮಾರ್ಗದಲ್ಲಿ 104 ಕಿ.ಮೀ ರೈಲು ಹಳಿ ಜೋಡಣೆ ಪೂರ್ಣಗೊಂಡಿದೆ. ಕಲಬುರಗಿ ಜಿಲ್ಲೆಯ ಮರಗುತ್ತಿಯಲ್ಲಿ 1.67 ಕಿ.ಮೀ ಟನಲ್ ನಿರ್ಮಾಣದಲ್ಲಿ 1.04 ಕಿ. ಮೀ ಕಾಮಗಾರಿ ಮುಗಿದಿದೆ. 200 ಮೀಟರ್ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ. 
 
ಬೀದರ್-ಕಲಬುರಗಿ ರೈಲ್ವೆ ಮಾರ್ಗದಲ್ಲಿ 14 ಬೃಹತ್ ಸೇತುವೆಗಳು, 183 ಸಣ್ಣ ಪ್ರಮಾಣದ ಸೇತುವೆಗಳು, 12 ಓವರ್ ಬ್ರಿಡ್ಜ್‌ಗಳು ಮತ್ತು 53 ಅಂಡರ್‌ಬ್ರಿಡ್ಜ್‌ಗಳಿವೆ. ಬೀದರ್‌ನಿಂದ ಕಲಬುರಗಿವರೆಗೆ 13 ರೈಲ್ವೆ ನಿಲ್ದಾಣಗಳಿರಲಿವೆ ಎಂದು ಮುಖ್ಯ ಇಂಜಿನಿಯರ್ ನಾರಾಯಣ್ ರಾವ್ ತಿಳಿಸಿದ್ದಾರೆ 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ