ಬೆಂಗಳೂರು: ಇಂದೂ ಸದನದಲ್ಲಿ ವಾಲ್ಮೀಕಿ ಹಗರಣದ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ಮುಂದುವರಿದಿದೆ. ಶಾಸಕ ಪ್ರದೀಪ್ ಈಶ್ವರ್ ಇಂದು ಸದನದಲ್ಲಿ ಮಾತನಾಡಿದ್ದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದನದಲ್ಲಿ ಪ್ರದೀಪ್ ಈಶ್ವರ್ ಗದ್ದಲದ ನಡುವೆಯೂ ಮಾತಿಗೆ ಎದ್ದು ನಿಂತರು. ಈ ವೇಳೆ ಬಿಜೆಪಿಯವರ ಘೋಷಣೆಯ ನಡುವೆ ಅವರ ಧ್ವನಿ ಕೇಳುತ್ತಿರಲಿಲ್ಲ. ಹೀಗಾಗಿ ಏರು ಧ್ವನಿಯಲ್ಲಿ ಬಿಜೆಪಿಯವರಿಗೆ ಏನಾದ್ರೂ ಮಾನ ಮರ್ಯಾದೆ ಇದ್ರೆ ರಾಜ್ಯದಲ್ಲಿ ಮಳೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಎ ಮಾಡಲು ಅವಕಾಶ ಕೊಡಬೇಕು ಎಂದು ಕೂಗಾಡಿದರು.
ಒಂದೆಡೆ ತಾಳ್ಮೆ ಕಳೆದುಕೊಂಡು ಕೂಗಾಡಿದ ಅವರನ್ನು ಕೈ ಶಾಸಕರು ಸಮಾಧಾನಿಸಬೇಕಾಯಿತು. ರಾಜ್ಯದಲ್ಲಿ ಮಳೆಯಿಂದಾಗಿ ಸಾಕಷ್ಟು ಜನ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರು ಅವಕಾಶ ಕೊಡಲಿ. ಇಲ್ಲಿರುವ ಎಲ್ಲಾ ಶಾಸಕರಿಗೂ ಸಿಎಂ ಸಿದ್ದರಾಮಯ್ಯ ಸಾಹೇಬ್ರು 25 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಇಲ್ಲಾಂದ್ರೆ ಹೇಳಲಿ ನೋಡೋಣ ಎಂದು ಹೇಳಿದಾಗ ವಿಪಕ್ಷ ನಾಯಕ ಆರ್ ಅಶೋಕ್ ಆಕ್ಷೇಪಿಸಿದರು.
ನಿಯಮಗಳಿಗೆ ವಿರುದ್ಧವಾಗಿ ಸದನ ನಡೆಸಲಾಗುತ್ತಿದೆ. ಇಲ್ಲಿ ಬೇಡದ ವಿಚಾರಗಳನ್ನು ಎಳೆದು ತರಲಾಗುತ್ತಿದೆ ಎಂದು ಆಕ್ಷೇಪಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ಈಶ್ವರ್ ಅವರೇ ಪಕ್ಷದ ವಿಚಾರ ಇಲ್ಲಿ ಬೇಡ, ಸಮಸ್ಯೆ ಬಗ್ಗೆ ಮಾತನಾಡಿ ಎಂದರು. ಆದರೂ ಪ್ರದೀಪ್ ಈಶ್ವರ್ ಸಮಯ ಮೀರಿ ಮಾತನಾಡಿದಾಗ ಸ್ಪೀಕರ್ ಬೇರೆಯವರಿಗೆ ಅವಕಾಶ ಕೊಡಲು ಮುಂದಾದರು.