ಹುಬ್ಬಳ್ಳಿ: ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಎಸ್‌ಐಟಿ ವಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಕ್ಷಮೆಗೆ ಅರ್ಹರಲ್ಲ, ಅವರು ಮಾಡಿದ ತಪ್ಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಒತ್ತಾಯಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಬಂಧನಕ್ಕೂ ಮುನ್ನಾ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಅವರ ಕುಟುಂಬ ಹಾಗೂ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಿದ್ದರು.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯಲ್ಲಿ ಪ್ರಜ್ವಲ್ ರೇವಣ್ಣ ಕ್ಷಮೆಯಾಚಿಸುತ್ತಿರುವ ಹಿಂದಿನ ಕಾರಣ ಗೊತ್ತಿಲ್ಲ. ಆದರೆ, ಅವರು ಕ್ಷಮೆಗೆ ಅರ್ಹರಲ್ಲ ಎಂದು ಕಟುವಾಗಿ ಮಾತನಾಡಿದರು.
ನಮ್ಮ ದೇಶದಲ್ಲಿ ಮಹಿಳೆಯರಿಗೆ ತುಂಬಾನೇ ಗೌರವವನ್ನು ನೀಡುತ್ತೇವೆ. ಆದರೆ ಪ್ರಜ್ವಲ್ ರೇವಣ್ಣ ಮಹಿಳೆಯರ ಜತೆ ನಡೆದುಕೊಂಡ ರೀತಿ ಅಸಹ್ಯವಾಗಿದೆ. ಆತ ರಾಜ್ಯದ ಜನತೆ ಬಳಿ ಕ್ಷಮೆಯಾಚಿಸಿದರು ಕ್ಷಮೆಗೆ ಅರ್ಹರಲ್ಲ. ಅವರು ಮಾಡಿದ ತಪ್ಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಲಿ ಎಂದರು.
ಇದು ಬಿಜೆಪಿಯ ಸ್ಪಷ್ಟ ನಿಲುವು ಎಂದು ಜೋಶಿ ಒತ್ತಿ ಹೇಳಿದರು. ಭಾರತದ ನ್ಯಾಯಾಂಗ ವ್ಯವಸ್ಥೆಯು ಶಕ್ತಿಯುತವಾಗಿದೆ ಮತ್ತು ತನಿಖೆಯನ್ನು ತ್ವರಿತವಾಗಿ ನಡೆಸಬೇಕು.