ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈಸೂರಿನಿಂದ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ನಿರಾಕರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಪರ ಧ್ವನಿಯೆತ್ತಿದ್ದಾರೆ.
ಪ್ರತಾಪ್ ಸಿಂಹ ಮೈಸೂರಿನಿಂದ ಎರಡು ಬಾರಿ ಸಂಸದರಾಗಿ ಗೆದ್ದು ಬಂದಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಬದಲು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಗೆ ಒತ್ತಡ ಹೇರುತ್ತಿದೆ.
ಇದು ಪ್ರತಾಪ್ ಸಿಂಹ ಅಭಿಮಾನಿಗಳನ್ನು ಕೆರಳಿಸಿದೆ. ಮೈಸೂರಿನಲ್ಲಿ ಸಂಸದರಾಗಿ ಯಾರ ಹಂಗೂ ಇಲ್ಲದೇ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗಿದ್ದಕ್ಕೆ ಈ ಶಿಕ್ಷೆಯಾ ಎಂದು ಪ್ರಶ್ನಿಸಿದ್ದಾರೆ. ನೇರವಾಗಿ ಕೇಂದ್ರ ನಾಯಕರನ್ನು ಸಂಪರ್ಕಿಸಿ ತಮ್ಮ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುವ ಪ್ರತಾಪ್ ಸಿಂಹ ರಾಜ್ಯ ನಾಯಕರ ಕಾಲಿಗೆ ಬೀಳುತ್ತಿಲ್ಲ. ಹೊಂದಾಣಿಕೆ ರಾಜಕೀಯ ಮಾಡುತ್ತಿಲ್ಲ ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಆದರೆ ತಮಗೆ ಟಿಕೆಟ್ ನಿರಾಕರಣೆ ಸುದ್ದಿ ಓಡಾಡುತ್ತಿದ್ದರೂ ಸಂಸದ ಪ್ರತಾಪ್ ಸಿಂಹ ಮೈಸೂರು-ಮನಮಧುರೈ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರಕ್ಕೆ ಕೇಂದ್ರದಿಂದ ಒಪ್ಪಿಗೆ ಪಡೆದುಕೊಂಡು ಬಂದಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.