ಮೈಸೂರು: ಈ ಬಾರಿ ಲೋಕಸಭೆ ಚುನಾವಣೆಗೆ ಮೈಸೂರು ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹಗೆ ನಿರೀಕ್ಷೆಯಂತೇ ಬಿಜೆಪಿ ಟಿಕೆಟ್ ನೀಡಿಲ್ಲ. ಅವರ ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಗೆ ಅವಕಾಶ ಸಿಕ್ಕಿದೆ.
ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗುತ್ತದೆ ಎಂದು ಈ ಮೊದಲೇ ಅನುಮಾನಗಳಿತ್ತು. ಇದರ ಬೆನ್ನಲ್ಲೇ ಅವರ ಪರವಾಗಿ ಅವರ ಬೆಂಬಲಿಗರು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರು ಕೈ ಬಿಟ್ಟಿರುವುದು ದೃಢಪಟ್ಟ ಬಳಿಕವೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳ್ಳೆಯ ಕೆಲಸ ಮಾಡಿದ ಯುವ ಸಂಸದರಿಗೆ ಅವಕಾಶ ಸಿಗಲ್ಲ. ಯುವಕರು ರಾಜಕಾರಣಕ್ಕೆ ಬರಬೇಕಾದರೆ ಕೆಲಸ ಕಲಿಯುವ ಮೊದಲು ಆಂತರಿಕ ರಾಜಕಾರಣ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕು ಎಂದು ಹಲವರು ಟಾಂಗ್ ಕೊಟ್ಟಿದ್ದಾರೆ. ಕೊನೆ ಪಕ್ಷ ಮೈಸೂರಿನಲ್ಲಿ ಅಲ್ಲದಿದ್ದರೆ ಬೇರೆ ಕಡೆಯಾದರೂ ಅವರಿಗೆ ಟಿಕೆಟ್ ನೀಡಬಹುದಿತ್ತಲ್ಲವೇ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಇದರ ನಡುವೆ ಪ್ರತಾಪ್ ಸಿಂಹ ಮಾತ್ರ ಈ ಪರಿಸ್ಥಿತಿಗೆ ಮೊದಲೇ ಸಿದ್ಧರಾದಂತಿದೆ. ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟವಾಗುತ್ತಿದ್ದಂತೇ ಟ್ವೀಟ್ ಮಾಡಿರುವ ಸಿಂಹ ತಯಾರಿ ಆರಂಭಿಸೋಣ.. ದೇಶಕ್ಕಾಗಿ.. ಮೋದಿಗಾಗಿ ಎಂದು ಪೋಸ್ಟ್ ಮಾಡುವ ಮೂಲಕ ನೂತನ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.