ಬೆಂಗಳೂರು: ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಲ್ಲಿ ತಮ್ಮ ಕುಟುಂಬದವರ ಟ್ರಸ್ಟ್ ಹೆಸರಿನಲ್ಲಿ ನಾಗರಿಕ ಬಳಕೆ (ಸಿಎ) ಜಮೀನು ಖರೀದಿ ಮಾಡಿರುವುದು ನಿಜ ಎಂದು ಒಪ್ಪಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅದರಲ್ಲಿ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದಾರೆ.
ನಾವು ಕಾನೂನಾತ್ಮಕವಾಗಿಯೇ ಭೂಮಿ ಖರೀದಿಸಿದ್ದೇವೆ. ನಾವು ಕೌಶಲಾಭಿವೃದ್ಧಿ ಕೇಂದ್ರ ಮಾಡಬಾರದೇ? ಇದರಲ್ಲಿ ತಪ್ಪೇನಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಸಿಎಂ ಸಿದ್ದರಾಮಯ್ಯ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲೇ ನಿವೇಶ ನೀಡಲಾಗಿದೆ. ಬಿಜೆಪಿಯವರು ಚಾಣಕ್ಯ ವಿವಿಗೆ ಹೇಗೆ ಜಮೀನು ಕೊಟ್ಟರು? ಖರ್ಗೆ ಕುಟುಂಬಕ್ಕೆ ಜಮೀನು ಮಂಜೂರು ಮಾಡಬಾರದು ಎಂದು ಎಲ್ಲಿದೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
ಖರ್ಗೆ ಕುಟುಂಬ ನಡೆಸುತ್ತಿರುವ ಟ್ರಸ್ಟ್ ಗೆ ಸಿಎ ಕೋಟಾದಲ್ಲಿ ಜಮೀನು ನೀಡಿರುವುದರ ಬಗ್ಗೆ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿದ್ದು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದೆ. ಮುಡಾ ಹಗರಣ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಮಲ್ಲಿಕಾರ್ಜುನ ಕುಟುಂಬದವರು ನಡೆಸುತ್ತಿರುವ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಕೆಐಡಿಬಿಯಿಂದ 5 ಎಕರೆ ಜಾಗ ಪಡೆದುಕೊಂಡಿದ್ದಾರೆ ಎಂಬುದು ಆರೋಪ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಸಿಎ ಸೈಟು ಪಡೆಯಲು ಕೆಲವು ಕಾನೂನುಗಳಿವೆ. ಆದರೆ ಖರ್ಗೆ ಕುಟುಂಬಕ್ಕೆ ಇದೆಲ್ಲಾ ನಿಯಮಗಳನ್ನು ಮೀರಿ ಜಮೀನು ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.