ಬೆಂಗಳೂರು: ಹಾಲು ಬಸ್ ದರ ಏರಿಕೆಯಾಯ್ತು, ಈಗ ಆಸ್ತಿ ನೋಂದಣಿ ಬೆಲೆ ಏರಿಕೆ ಜನರಿಗೆ ಹೊಸ ಬೆಲೆ ಏರಿಕೆ ಬರೆಯಾಗಿದೆ. ನಾಳೆಯಿಂದ ಹೊಸ ದರ ಜಾರಿಗೆ ಬರಲಿದೆ.
ಆಸ್ತಿ ನೋಂದಣಿ ದರ ಶೇ.1 ರಷ್ಟಿತ್ತು. ಇದೀಗ ಶೇ.2 ರಷ್ಟು ಹೆಚ್ಚಳವಾಗಿದೆ. ಆಗಸ್ಟ್ 31 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈಗ ನಿವೇಶನ, ಫ್ಲ್ಯಾಟ್, ಮನೆ ಸೇರಿದಂತೆ ಆಸ್ತಿ ನೋಂದಣಿ ದುಬಾರಿಯಾಗಲಿದೆ.
ನೋಂದಣಿ ಶುಲ್ಕ ಶೇ.1 ರಿಂದ ಶೇ.2 ಕ್ಕೆ, ಮುದ್ರಾಂಕ ಶುಲ್ಕ 6.6 ರಿಂದ ಶೇ.7.6 ಕ್ಕೆ ಏರಿಕೆಯಾಗಿತ್ತು. ಈ ಬಗ್ಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆನ ನೀಡಿದೆ. ಹೀಗಾಗಿ ಸೋಮವಾರದಿಂದ ಹೊಸ ದರ ಜಾರಿಗೆ ಬರಲಿದೆ.
ಈ ಬೆಲೆ ಏರಿಕೆ ಬಿಸಿ ಮತ್ತೆ ಮಧ್ಯಮ ವರ್ಗದವರಿಗೆ ತಟ್ಟಲಿದೆ. ಈಗಾಗಲೇ ಅಗತ್ಯ ವಸ್ತುಗಳು, ಬಸ್ ದರ ಏರಿಕೆಯಾಗಿದ್ದು ಅದರ ಜೊತೆಗೆ ಈಗ ಆಸ್ತಿ ಖರೀದಿಯೂ ದುಬಾರಿಯಾಗಲಿದೆ.