ವನ್ಯಪ್ರಾಣಿಗಳ ಸಂಘರ್ಷ ತಡೆಗೆ ತಕ್ಷಣದ ಹಾಗೂ ಶಾಶ್ವತ ಯೋಜನೆಗೆ ಅಗತ್ಯ ಕ್ರಮ
ಶನಿವಾರ, 29 ಜನವರಿ 2022 (20:56 IST)
● ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ಮೋಹನ್ ಭರವಸೆ
● ಮೈಸೂರು ಅರಣ್ಯಭವನದಲ್ಲಿ ಕೊಡಗಿನ ವನ್ಯಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಕ್ರಮಕ್ಕೆ ಸಭೆ
ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳು ಮತ್ತು ಮಾನವ ಸಂಘರ್ಷದ ಯೋಜನೆಗಳು ಉಂಟಾಗಬಹುದು, ಅದನ್ನು ತಡೆಗಟ್ಟಲು ತಕ್ಷಣದ ಕ್ರಮಗಳನ್ನು ಮತ್ತು ಇತ್ತೀಚಿನ ದಿನಗಳಲ್ಲಿ ಶಾಶ್ವತವಾಗಿ ತಡೆಗಟ್ಟುವ ಕಾರ್ಯಯೋಜನೆಯನ್ನು ಕೈಗೊಳ್ಳಲಾಗುತ್ತದೆ. ಶಾಶ್ವತ ಯೋಜನೆ ರೂಪಿಸಲು ಅನುದಾನದ ಕೊರತೆ ಉಂಟಾಗುತ್ತಿದೆ. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿ.ಸಿ.ಸಿ.ಎಫ್) ಮತ್ತು ಅರಣ್ಯ ಇಲಾಖೆ ಎಚ್.ಓ.ಎಫ್.ಎಫ್ ಸಂಜಯ್ಮೋಹನ್ ಅವರು ಭರವಸೆ ನೀಡಿದ್ದಾರೆ.
ಮೈಸೂರಿನ ಅರಣ್ಯ ಭವನದಲ್ಲಿ ಕೊಡಗು ಜಿಲ್ಲೆಯ ವನ್ಯಜೀವಿ ಹಾವಳಿಯನ್ನು ತಡೆಗಟ್ಟುವ ವಿದ್ಯುತ್ ಕೊಡಗು ಸಂರಕ್ಷಣಾ ವೇದಿಕೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿ ತಮ್ಮ ಅಧಿಕಾರಿಗಳು ಮತ್ತು ಕೊಡಗು ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಹುಲಿ ಸೆರೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದೇವು. ಈಗ ಎರಡು, ಮೂರು ಜಾನುವಾರುಗಳ ಮೇಲೆ ಒಂದೇ ಸ್ಥಳದಲ್ಲಿ ಒಂದೇ ಹುಲಿ ದಾಳಿ ನಡೆಸಿರುವ ಘಟನೆ ನಡೆಯುತ್ತಿದ್ದಂತೆ, ಹುಲಿ ಸೆರೆಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲಾ ಕಾಡಾನೆಗಳಿಂದ ಸಮಸ್ಯೆಯಾಗಿಲ್ಲ. ಜಿಲ್ಲೆಯಲ್ಲಿ 70ರಿಂದ 80ಕಾಡಾನೆಗಳು ಅರಣ್ಯದಿಂದ ಗ್ರಾಮಕ್ಕೆ ನುಗ್ಗುತ್ತಿದ್ದು, ಅವುಗಳ ಬಗ್ಗೆ ನಿಗಾವಹಿಸಲಾಗುತ್ತಿದೆ.
ಉಪಟಳ ನೀಡುತ್ತಿರುವ ಐದು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಆದೇಶಿಸಲಾಗಿದ್ದು, ಅದರಲ್ಲಿ ಒಂದನ್ನು ಮಾತ್ರ ಹಿಡಿದು ಸ್ಥಳಾಂತರಿಸಲಾಗಿದೆ ಎಂಬ ಮನವಿಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಾಸನ ಜಿಲ್ಲೆಯಲ್ಲಿ ಎಸ್.ಎಂ.ಎಸ್ ಅಲರ್ಟ್ ಸಿಸ್ಟಮ್ ತುಂಬಾ ಅನುಕೂಲವಾಗಿದ್ದು, ಅದನ್ನು ಕೊಡಗಿನಲ್ಲಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು. ವನ್ಯ ಪ್ರಾಣಿಗಳಿಗೆ ಆಹಾರ ಅಲ್ಲದೇ ಅರಣ್ಯವನ್ನು ವ್ಯಾಪಿಸಿಕೊಳ್ಳುತ್ತಿರುವ ಲೆಂಟೆನ ಪ್ರಭೇದದ ಗಿಡಗಳನ್ನು ತೆಗೆದು ಹುಲ್ಲು ಮತ್ತು ಬಿದಿರು ಹಾಕಲು ಕ್ರಮ. ಇದರೊಂದಿಗೆ ವನ್ಯ ಪ್ರಾಣಿಗಳು ನುಸುಳು ತಡೆಗೆ ಕಂದಕಗಳನ್ನು ಹೆಚ್ಚಾಗಿ ನಿರ್ಮಿಸಿ ದುರಸ್ಥಿಪಡಿಸಲು ಅಗತ್ಯವಿರುವೆಡೆಗೆ ಟೆಂಡರ್ ಕರೆದು ಯೋಜನೆ ರೂಪಿಸಲಾಗುವುದು,ಇಂದಿನ ಸಭೆಯ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾವುವುದು ಎಂದು ಸಂಜಯ್‌ಮೋಹನ್ ಅವರು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ಕೊಡಗು ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅವರು ಈ ಹಿಂದೆ ಇದ್ದ ಜಿಲ್ಲೆಯ ಸಿಸಿಎಫ್ ಮನೋಜ್‌ಕುಮಾರ್ ಅವರಿಗೆ ಕೊಡಗಿನ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಯೋಜನೆಯ ಬಗ್ಗೆ ಮನವಿ ನೀಡಲಾಗಿತ್ತು. ಆದರೆ, ಅವರನ್ನು ವರ್ಗಾವಣೆ ಮಾಡಿದ್ದರಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೇ ಬೆಳೆಗಾರರು ನಷ್ಟ ಅನುಭವಿಸುತ್ತಾ ಅಸಹಾಯಕರಾಗಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ನೀಡುವುದರೊಂದಿಗೆ ಶಾಶ್ವತ ಯೋಜನೆಯನ್ನು ರೂಪಿಸಿ ಕಂದಕಗಳನ್ನು ಅಗಲ ಮಾಡಿ ದುರಸ್ಥಿ ಪಡಿಸಲು ತಾಲೂಕಿಗೆ ಒಂದು ಅರಣ್ಯ ಇಲಾಖೆಯೇ ಸ್ವಂತ ಹಿಟಾಚಿಯನ್ನು ಖರೀದಿಸಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.ಪ್ರತಿವರ್ಷ ಕಂದಕ ನಿರ್ಮಾಣ ಮತ್ತು ದುರಸ್ತಿಗೆ 40-50 ಕೋಟಿ ಖರ್ಚು ಮಾಡುವ ಬದಲು ಇಳಕೆಯಿಂದಲೇ ಹಿಟಾಚಿ ಖರೀದಿಸಬಹುದಲ್ಲವೇ ಎಂದ ಅವರು ಜಿಲ್ಲೆಯಲ್ಲಿ ನಿಮ್ಮ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳ ಸಭೆ ಕರೆದು ಶಾಶ್ವತ ಯೋಜನೆ ರೂಪಿಸಲು ಸಲಹೆ ನೀಡಿದರು. ಜಿಲ್ಲೆಯಲ್ಲಿ ಬಹುಪಥದ ಹೆದ್ದಾರಿಗಳು, ರೈಲ್ವೆ ಮಾರ್ಗಕ್ಕೆ 10 ಸಾವಿರ ಕೋಟಿಗೂ ಹೆಚ್ಚು ಅನುದಾನ ತರಲು ಸಾಧ್ಯವಾಗುವುದಾದರೆ, ವನ್ಯಪ್ರಾಣಿಗಳ ಹಾವಳಿ ತಡೆಗೆ ಅನುದಾನದ ಕೊರತೆ ಏಕೆ ಎಂದು ಪ್ರಶ್ನಿಸಿದ ಅವರು ಸರ್ಕಾರ ಅಗತ್ಯವಾದ ಅನುದಾನವನ್ನು ಒದಗಿಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯೂ ಸಹ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.
ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಕರ್ನಲ್ ಚೆಪ್ಪುಡೀರ ಪಿ. ಮುತ್ತಣ್ಣ ಅವರು ಮಾತನಾಡಿ ದಕ್ಷಿಣ ಕೊಡಗಿನ ಕೇರಳ, ಕರ್ನಾಟಕ ಗಡಿಯ ಕುಟ್ಟದಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟ ಅರಣ್ಯ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಹಿನ್ನೆಲೆ ಬ್ರಹ್ಮಗಿರಿ, ನಾಗರಹೊಳೆ (ಬೇಗೂರು ಬ್ರಹ್ಮಗಿರಿ) ವನ್ಯಪ್ರಾಣಿಗಳ ಕಾರಿಡಾರ್‌ಗೆ ತಡೆಯುಂಟಾಗಿದೆ. ಈ ತಡೆಯನ್ನು ತೆರವು ಮಾಡಿದರೆ ವನ್ಯಪ್ರಾಣಿಗಳು ಬ್ರಹ್ಮಗಿರಿಯಿಂದ ನಾಗರಹೊಳೆ ಮೂಲಕ ಕೇರಳದ ವಯನಾಡು, ಬಂಡಿಪುರದವರೆಗೆ ವಿಶಾಲ ಅರಣ್ಯದಲ್ಲಿ ಸಂಚರಿಸುತ್ತವೆ. ಹಾಗೇಯೇ ಉತ್ತರ ಕೊಡಗಿನಲ್ಲಿ ಮಡಿಕೇರಿ ವಿಭಾಗದಲ್ಲಿ ಅಕ್ರಮವಾಗಿರುವ ರಬ್ಬರ್ ಎಸ್ಟೇಟ್‌ಗಳು ವನ್ಯಪ್ರಾಣಿಗಳ ಕಾರಿಡಾರ್'ಗಳನ್ನು ಅತಿಕ್ರಮಿಸಿಕೊಂಡಿದ್ದು, ಇವುಗಳನ್ನು ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಂಡರೆ ವನ್ಯಪ್ರಾಣಿಗಳ ಸಂಚಾರದ ಕಾರಿಡಾರ್ ವಿಸ್ತಾರವಾಗಲಿದೆ. ಇದರಿಂದ ವನ್ಯಪ್ರಾಣಿಗಳ ಸಂಘರ್ಷ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದರು.
ಜಭ್ಬೂಮಿ ಸಂಘಟನೆಯ ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ ಅವರು ಮಾತನಾಡಿ ವನ್ಯಪ್ರಾಣಿಗಳ ಹಾವಳಿಯಿಂದ ತೋಟಕ್ಕೆ ಹೋಗಿ ಜೀವಂತವಾಗಿ ಕಾರ್ಮಿಕರು ಹಾಗೂ ಬೆಳೆಗಾರರು ವಾಪಾಸ್ಸು ಬರುತ್ತೇವೆ ಎನ್ನುವ ವಿಶ್ವಾಸವಿಲ್ಲದಾಗಿದೆ. ದೀರ್ಘಕಾಲಿಕ ಯೋಜನೆ ಅಗತ್ಯವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತ್ವರಿತವಾಗಿ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಸೂಕ್ತ ಯೋಜನೆ, ಹೆಚ್ಚಿನ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕ ಮಾಡಿ ಕಾರ್ಯಪಡೆ ರಚಿಸುವಂತೆ ಸಲಹೆ ನೀಡಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಅವರು ಮಾತನಾಡಿ ಅದಕ್ಕೆ ಅಗತ್ಯವಾದ ಅನುದಾನವನ್ನು ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಮುಂದಿನ ಬಜೆಟ್‌ನಲ್ಲಿಯೇ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು, ಅನುದಾನ ಇಲ್ಲ ಎಂದು ಅರಣ್ಯ ಇಲಾಖೆ ಶಾಶ್ವತ ಯೋಜನೆ ರೂಪಿಸಲು ಹಿಂದೇಟು ಹಾಕಬಾರದು. ಜನ ಜಾನುವಾರುಗಳ ಪ್ರಾಣಹಾನಿ ಮತ್ತು ಬೆಳೆನಷ್ಟಕ್ಕೆ ಕೊಡುವ ಪರಿಹಾರ ಶಾಶ್ವತ ಕ್ರಮವಲ್ಲ, ಅದರ ಬದಲು ವನ್ಯಪ್ರಾಣಿ ಗ್ರಾಮಗಳಿಗೆ ನುಸುಳುವುದ್ದನ್ನು ಶಾಶ್ವತವಾಗಿ ತಡೆಯಲು ಯೋಜನೆ ರೂಪಿಸಬೇಕು. ಇದಕ್ಕಾಗಿ ಪ್ರತಿ ವರ್ಷ ಕನಿಷ್ಠ 200 ಕೋಟಿಯಂತೆ ಪಂಚವಾರ್ಷಿಕ ಯೋಜನೆ ರೂಪಿಸಿ ಶಾಶ್ವತವಾದ ಯೋಜನೆ ರೂಪಿಸಲು ಸಲಹೆ ನೀಡಿದರು.
ಅರಣ್ಯ ಅಭಿವೃದಿ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರು ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ಮುಖ್ಯ ಸಂರಕ್ಷಣಾಧಿಕಾರಿ ನೇಮಿಸಬೇಕು. ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿಮಾಡಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಅರಣ್ಯದೊಳಗೆ ನೀರು ಹಾಗೂ ಆಹಾರವನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅರಣ್ಯದಲ್ಲಿರುವುದಕ್ಕಿಂತ ಗ್ರಾಮದ ತೋಟಗಳಲ್ಲಿ ಹೆಚ್ಚಿನ ಆಹಾರ ದೊರೆಯುವುದರಿಂದ ಗ್ರಾಮಕ್ಕೆ ನುಸುಳುತ್ತಿವೆ ಎಂದು ಹೇಳಿದರು.
ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರರಾದ ಚೆಪ್ಪುಡೀರ ಶರಿಸುಬ್ಬಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಸಿಸಿಎಫ್ ಸೇರಿದಂತೆ ಅರಣ್ಯ ಅಧಿಕಾರಿಗಳನ್ನು ಕನಿಷ್ಠ ಮೂರು ವರ್ಷ ವರ್ಗಾವಣೆ ಮಾಡದೇ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕು. ಜಿಲ್ಲೆಯ ಅರಣ್ಯ ಸರಹದ್ದು ಸುಮಾರು 282 ಕಿ.ಮೀ ಇದ್ದು, ಇಲ್ಲಿಗೆ ಕಂದಕ ನಿರ್ಮಿಸುವಂತೆ ಸಲಹೆ ನೀಡಿದರು.
ಕೊಡಗು ಬೆಳೆಗಾರರ ಒಕ್ಕೂಟದ ಪ್ರ. ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಅವರು ಮಾತನಾಡಿ ಅರಣ್ಯದ ಸರಹದ್ದಿನಲ್ಲಿ ನೀರಾವರಿ ಚಾನೆಲ್ ಮಾದರಿಯಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಕನಿಷ್ಟ 15 ಅಡಿ ಆಳ, 20 ಅಡಿ ಅಗಲದ ಕಂದಕ ನಿರ್ಮಿಸುವುದರಿಂದ ಮಣ್ಣುಕುಸಿಯುವುದು ಹಾಗೂ ಕಾಡು ಬೆಳೆಯುವುದನ್ನು ತಡೆಗಟ್ಟಿ ನಿರ್ವಹಣೆ ಕಾರ್ಯ ಇಲ್ಲದೇ ವನ್ಯಪ್ರಾಣಿಗಳು ನುಸುಳು ತಡೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳೆಗಾರ ಮಲ್ಲಮಾಡ ಪ್ರಭುಪೂಣಚ್ಚ ಅವರು ಮಾತನಾಡಿ ಅತಿ ಹೆಚ್ಚು ಮಳೆಬೀಳುವ ಕೊಡಗಿನಲ್ಲಿ ಬೇಲಿ ವನ್ಯ ಪ್ರಾಣಿಗಳ ತಡೆಗೆ ಪರಿಣಾಮಕಾರಿ ಆಗದೆ ವೈಫಲ್ಯ ಕಂಡಿದೆ. ಅದರ ನಿರ್ವಹಣೆಯೇ ಕಷ್ಟವಾಗಿದೆ. ಆದ್ದರಿಂದ ಗುಣಮಟ್ಟದ ಕಂದಕ ನಿರ್ಮಾಣ ಮಾಡಿ, ಅದನ್ನು ನಿರ್ವಹಣೆ ಮಾಡಿದರೆ ವನ್ಯಪ್ರಾಣಿಗಳ ತಡೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದಸುಬ್ಬಯ್ಯ ಅವರು ಮಾತನಾಡಿ ಗ್ರಾಮಕ್ಕೆ ನುಸುಳಿ ದಾಂದಲೆ ಮಾಡುತ್ತಿರುವ ಕಾಡಾನೆಗಳನ್ನು ತಕ್ಷಣ ಹಿಡಿಯಲು ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿದರು.
ಈ ಸಂದರ್ಭ ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರಾದ ಮಲ್ಲಮಾಡ ಪ್ರಭುಪೂಣಚ್ಚ, ಕೊಡಗು ಜಿಲ್ಲಾ ಅರಣ್ಯ ಇಲಾಖೆ ವಾರ್ಡನ್ ಹಾಗೂ ಕೊಡಗು ವನ್ಯಜೀವಿ ಸಂಘದ ಉಪಾಧ್ಯಕ್ಷ ಕುಂ ಪರ್ಯಾಯಂಗಡ ಬಾಸ್ ಮಾದಪ್ಪ ಬಲ್ಲಚಂಡ ರಾಯ ಬೋಪಣ್ಣ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಅರಣ್ಯ ಇಲಾಖೆ ಜಗತ್‌ರಾಮ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್, ಮಡಿಕೇರಿ ವೃತ್ತ ಡಾ. ಡಿ. ಶಂಕರ್, ಮೈಸೂರಿನ ಡಿ.ಸಿ.ಎಫ್ ಕೆ. ಕಮಲ ಮತ್ತು ಕರಿಕಾಳನ್, ನಾಗರಹೊಳೆ ಹುಲಿ ಸಂರಕ್ಷಣೆ ಯೋಜನೆಯ ನಿರ್ದೇಶಕ ಮಹೇಶ್‌ಕುಮಾರ್, ಹುಣಸೂರು ಡಿ.ಸಿ.ಎಫ್.ಎಲ್. ಪ್ರಶಾಂತ್‌ಕುಮಾರ್, ಮಡಿಕೇರಿ ವನ್ಯ ಜೀವಿ ಡಿ.ಸಿ.ಎಫ್. ಶಿವರಾಂ ಬಾಬು, ಡಬ್ಲು.ಡಬ್ಲು.ಎಫ್. ವನ್ಯಪ್ರಾಣಿ ಸಂಶೋಧಕ ಡಿ. ಭೂಮಿನಾಥನ್, ಡಬ್ಲು.ಡಬ್ಲು.ಎಫ್‌ನ ತಂಡ ಪ್ರಮುಖರಾದ ಸಂಕೇತ್ ಭಾಲೆ, ಗಣೇಶ್ ಪ್ರಸಾದ್, ವಿರಾಜಪೇಟೆ ಡಿ.ಸಿ.ಎಫ್ ಚಕ್ರಪಾಣಿ, ಮಡಿಕೇರಿ ವನ್ಯಜೀವಿ ಎ.ಸಿ.ಎಫ್ ದಯಾನಂದ, ಸೋಮವಾರಪೇಟೆ ವಿಭಾಗದ ಎ.ಸಿ.ಎಫ್ ಕೆ.ಎ. ನೆಹರು, ಕುಶಾಲನಗರ ಆರ್.ಎಫ್.ಓ ಅನನ್ಯಕುಮಾರ್.