ರಾಹುಲ್ ಗಾಂಧಿ ಸೂಚಿಸಿದ್ದಕ್ಕೆ ಕೇರಳ ಸಂತ್ರಸ್ತರಿಗೆ ಕರ್ನಾಟಕ ಹಣ

Krishnaveni K

ಮಂಗಳವಾರ, 20 ಫೆಬ್ರವರಿ 2024 (14:26 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಆನೆ ದಾಳಿಯಿಂದ ಸಾವಿಗೀಡಾದ ಕುಟುಂಬಕ್ಕೆ ಕರ್ನಾಟಕ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿರುವುದು ಭಾರೀ ಟೀಕೆಗೆ ಗುರಿಯಾಗಿದೆ.
 

ವಯನಾಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರ. ಇತ್ತೀಚೆಗೆ ಇಲ್ಲಿ ಆನೆ ದಾಳಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಆತನ ಕುಟುಂಬಸ್ಥರನ್ನು ಮೊನ್ನೆಯಷ್ಟೇ ರಾಹುಲ್ ಗಾಂಧಿ ಖುದ್ದಾಗಿ ಹೋಗಿ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಆ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

ಈ ಬಗ್ಗೆ ಕಟು ಟೀಕೆ ನಡೆಸಿರುವ ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ವೈ. ವಿಜಯೇಂದ್ರ, ಕರ್ನಾಟಕದ ಆನೆಯ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಕ್ಕೆ ಆ ಕುಟುಂಬಕ್ಕೆ ಸಹಾಯ ಮಾಡಲು ರಾಹುಲ್ ಗಾಂಧಿ ಸೂಚಿಸಿದ್ದರು. ಈ ಕಾರಣಕ್ಕೆ ರಾಜ್ಯದ ತೆರಿಗೆದಾರರ ಹಣ ದುರುಪಯೋಗಪಡಿಸಿಕೊಂಡಿರುವುದು ಅವಮಾನಕರ ಎಂದಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ವಾಗ್ದಾಳಿ ನಡೆಸಿರುವ ವಿಜಯೇಂದ್ರ, ಇದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಬರಗಾಲ ಸ್ಥಿತಿಯಿದ್ದು, ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸ್ವಲ್ಪವೂ ನಾಚಿಕೆಯಿಲ್ಲದೇ ರಾಜ್ಯದ ತುರ್ತು ಅಗತ್ಯಗಳ ಬಗ್ಗೆ ಗಮನಹರಿಸುವ ಬದಲು ರಾಹುಲ್ ಗಾಂಧಿಯವರನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ರಾಜ್ಯದ ತೆರಿಗೆದಾರರ ಹಣವನ್ನು ಅನೈತಿಕವಾಗಿ ಬಳಸಿಕೊಳ‍್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಪಕ್ಷದ ವತಿಯಿಂದ ಬೇಕಾದರೆ ಹಣ ನೀಡಲಿ. ಆದರೆ ಸರ್ಕಾರದ ವತಿಯಿಂದ ಹಣ ನೀಡುವುದು ಯಾಕೆ? ಅದರಲ್ಲೂ ಸ್ವತಃ ಅರಣ್ಯ ಸಚಿವರೇ ರಾಹುಲ್ ಗಾಂಧಿಯವರಿಗೆ ನಿಮ್ಮ ಸೂಚನೆಯಂತೆ 15 ಲಕ್ಷ ರೂ. ನೀಡಲಾಗಿದೆ ಎಂದು ಪತ್ರ ಬರೆಯುತ್ತಾರೆ. ಬಳಿಕ ಸಿಎಂ ಸೂಚನೆ ಮೇರೆಗೆ ಹಣ ನೀಡಿರುವುದಾಗಿ ಮಾಧ‍್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಅನ್ಯ ರಾಜ್ಯದವರಿಗೆ ಈ ರೀತಿ ಕರ್ನಾಟಕ ಸರ್ಕಾರ ಪರಿಹಾರ ನೀಡುತ್ತಿರುವುದು ಇದೇ ಮೊದಲು ಎಂದು ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ