ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ಕೆಲವೆಡೆ ರಸ್ತೆಯೇ ಸ್ಮಿಮ್ಮಿಂಗ್ ಪೂಲ್ ಆಗಿದೆ. ಹೆಬ್ಬಾಳ, ಬಿಇಎಲ್ ಸರ್ಕಲ್ ನಲ್ಲಿ ನೀರಿನಲ್ಲೇ ವಾಹನಗಳು ಓಡಾಡುವ ವಿಡಿಯೋಗಳು ವೈರಲ್ ಆಗಿವೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಲೇ ಇದೆ. ಇಂದೂ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ವರದಿ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಜಿಲ್ಲೆಗಳಲ್ಲಿ ಇಂದೂ ಮಳೆ ಸಾಧ್ಯತೆಯಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಇದಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ತುಮಕೂರು, ಶಿವಮೊಗ್ಗ, ಉಡುಪಿ, ಹಾವೇರಿ, ಬಾಗಲಕೋಟೆ ಮುಂತಾದೆಡೆಯೂ ಯೆಲ್ಲೊ ಅಲರ್ಟ್ ಘೋಷಣೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಕನಿಷ್ಠ ಉಷ್ಣಾಂಶ 21 ಡಿಗ್ರಿಯಷ್ಟಿದೆ.
ಹೆಬ್ಬಾಳ, ಯಶವಂತಪುರ ಸುತ್ತಮುತ್ತ ಭಾರೀ ಮಳೆಯಾಗಿದ್ದು ಅಂಡರ್ ಪಾಸ್ ನಲ್ಲೂ ಮಳೆ ನೀರು ನಿಂತು ಸ್ವಿಮ್ಮಿಂಗ್ ಪೂಲ್ ನಂತತಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಸಂಜಯ್ ನಗರದಲ್ಲಿ ಮರ ಬಿದ್ದು ಕಾರು ಜಖಂ ಆಗಿರುವ ಘಟನೆಯೂ ವರದಿಯಾಗಿದೆ.