ಶಿರಾಡಿ ಘಾಟಿಯಲ್ಲಿ ಪದೇ ಪದೇ ರಸ್ತೆ ಕುಸಿತವಾಗುತ್ತಿರುವುದಕ್ಕೆ ಕಾರಣವೇ ಇದು

Krishnaveni K

ಗುರುವಾರ, 1 ಆಗಸ್ಟ್ 2024 (08:57 IST)
ಸಕಲೇಶಪುರ: ಶಿರಾಡಿ ಘಾಟಿಯಲ್ಲಿ ಮಳೆಗಾಲ ಬಂತೆಂದರೆ ಗುಡ್ಡ ಕುಸಿತದ ಸಮಸ್ಯೆ ಕಂಡುಬರುತ್ತಲೇ ಇದೆ. ಕಳೆದ ಮೂರು-ನಾಲ್ಕು ವರ್ಷದಿಂದ ಗುಡ್ಡ ಕುಸಿತದ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವನ್ನೂ ತಜ್ಞರು ವಿವರಿಸುತ್ತಾರೆ.

ಶಿರಾಡಿ ಘಾಟಿಯಲ್ಲಿ ಇತ್ತೀಚೆಗೆ ನಡೆದ ರಸ್ತೆ ಕಾಮಗಾರಿಗಳು ಮತ್ತು ಎತ್ತಿನ ಹೊಳೆ ಯೋಜನೆ ಕಾಮಗಾರಿಗಳೇ ಈ ರೀತಿ ಗುಡ್ಡ ಕುಸಿತಕ್ಕೆ ಕಾರಣ ಎಂಬುದು ಹಲವರ ಅಭಿಪ್ರಾಯವಾಗಿದೆ. ಈ ವರ್ಷವಂತೂ ಕಳೆದ ಎರಡು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶಿರಾಡಿ ಘಾಟಿ ಅಪಾಯಕಾರಿ ಸ್ಥಳವಾಗಿದೆ.

ಚಾರ್ಮಾಡಿಗಿಂತಲೂ ಶಿರಾಡಿಯಲ್ಲಿ ಹೆಚ್ಚಿನ ಭೂ ಕುಸಿತವಾಗುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಅವೈಜ್ಞಾನಿಕ ರಸ್ತೆ ಕಾಮಗಾರಿಗಳೇ ಕಾರಣ ಎನ್ನುವುದು ತಜ್ಞರ ಅಭಿಮತ. ಇತ್ತೀಚೆಗೆ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತಕ್ಕೂ ತಜ್ಞರು ಇದೇ ಕಾರಣ ನೀಡಿದ್ದರು. ರಸ್ತೆ ನಿರ್ಮಾಣ ಮಾಡುವಾಗ ನೈಸರ್ಗಿಕ ನೀರು ಹರಿದು ಹೋಗಲು ಸ್ಥಳಾವಕಾಶ ಬಿಡದೇ ಇರುವುದರಿಂದ ಮಳೆಗಾಲದಲ್ಲಿ ನೀರು ಹರಿದು ಮಣ್ಣು ಸಡಿಲವಾಗುತ್ತಿದೆ. ಇದರಿಂದ ಗುಡ್ಡ ಕುಸಿತವಾಗುತ್ತಿದೆ ಎಂದು ತಜ್ಞರು ಹೇಳಿದ್ದರು.

ಶಿರಾಡಿ ಘಾಟಿ ವಿಚಾರದಲ್ಲೂ ಇದೇ ಆಗುತ್ತಿದೆ. ಎತ್ತಿನ ಹೊಳೆ ಯೋಜನೆಗೆ ಶಿರಾಡಿ ಘಾಟಿಯಲ್ಲಿ ಭಾರೀ ಕಾಮಗಾರಿಯೇ ನಡೆಯಿತು. ರಸ್ತೆ ಕಾಮಗಾರಿಗಳ ವೇಳೆಯೂ ನೀರು ಹರಿದು ಹೋಗಲು ಜಾಗವಿಲ್ಲದಾಯಿತು. ಇದರಿಂದಾಗಿಯೇ ಶಿರಾಡಿ ಘಾಟಿಯಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಭೂಕುಸಿತವಾಗುತ್ತಿದೆ ಎನ್ನಲಾಗಿದೆ. ಮಾನವ ಮಾಡುವ ತಪ್ಪುಗಳಿಗೆ ಪ್ರಕೃತಿಯೇ ಪಾಠ ಕಲಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ