ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿಯಲ್ಲಿ ಮತ್ತೆ ಭಾರೀ ಭೂ ಕುಸಿತವಾಗಿದ್ದು ಹಲವು ವಾಹನಗಳು ಮಣ್ಣಿನಡಿ ಸಿಲುಕಿದೆ.
ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿದ್ದು, ಎರಡು ಕಾರು, ಟ್ಯಾಂಕ್ ಸೇರಿ ಆರು ವಾಹನಗಳು ಮಣ್ಣಿನಡಿ ಸಿಲುಕಿದೆ. ಕಾರಿನಲ್ಲಿದ್ದವರನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ. ಶಿರಾಡಿ ಘಾಟಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಪದೇ ಪದೇ ಭೂಕುಸಿತವಾಗುತ್ತಿದೆ.
ಮೊನ್ನೆ ಸಂಜೆ ಶಿರಾಡಿ ಘಾಟಿಯಲ್ಲಿ ಭೂ ಕುಸಿತವಾಗಿದ್ದರಿಂದ ಕೆಲವು ಕಾಲ ಸಂಚಾರ ಸ್ಥಗಿತವಾಗಿತ್ತು. ಆದರೆ ನಿನ್ನೆ ರಾತ್ರಿ ವಾಹನ ಸಂಚಾರ ನಡೆದಿತ್ತು. ಆದರೆ ಇಂದು ಮತ್ತೆ ಭೂ ಕುಸಿತವಾಗಿದ್ದು, ಭಾರೀ ಅನಾಹುತ ನಡೆಯುವುದರಲ್ಲಿತ್ತು. ಅದೃಷ್ಟವಶಾತ್ ಎಲ್ಲರೂ ಬದುಕುಳಿದಿದ್ದಾರೆ.
ಇನ್ನೊಂದೆಡೆ ಉಪ್ಪಿನಂಗಡಿ ಬಳಿ ನೇತ್ರಾವತಿ ನದಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವುದರಿಂದ ಬೆಂಗಳೂರು-ಮಂಗಳೂರು ನಡುವಿನ ವಾಹನ ಸಂಚಾರ ಸ್ಥಗಿತವಾಗಿದೆ. ಇದೀಗ ಶಿರಾಡಿ ಘಾಟಿ ಮೂಲಕವೂ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ. ಈಗಾಗಲೇ ಮಂಗಳೂರು-ಬೆಂಗಳೂರು ನಡುವಿನ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ.