ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ಬಿಡುಗಡೆ : ಪ್ರಭು ಚವ್ಹಾಣ್
ಸೋಮವಾರ, 3 ಅಕ್ಟೋಬರ್ 2022 (11:39 IST)
ಬೆಂಗಳೂರು : ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಚರ್ಮಗಂಟು ರೋಗವು ನೇರವಾಗಿ ಜಾನುವಾರುಗಳ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರು ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಲು ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಚರ್ಮಗಂಟು ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ಮಾಲೀಕರಿಗೆ ನಷ್ಟವನ್ನು ಭರಿಸಲು 2022ರ ಆಗಸ್ಟ್ 1ನೇ ತಾರೀಖಿನಿಂದ ಅನ್ವಯ ಆಗುವಂತೆ ಪ್ರತಿ ಹೈನು ರಾಸುಗಳಿಗೆ ಗರಿಷ್ಠ 20,000 ರೂ. ಮತ್ತು ಎತ್ತುಗಳಿಗೆ 30,000 ರೂ. ಹಾಗೂ ಪ್ರತಿ ಕರುವಿಗೆ 5,000 ರೂ. ಪರಿಹಾರ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.