ಬೆಂಗಳೂರು: ಚಾಮುಂಡಿಬೆಟ್ಟದಲ್ಲಿ ಅಕ್ಟೋಬರ್ 3ರಂದು ಈ ಬಾರಿಯ ಮೈಸೂರು ದಸರಾ ಮಹೋತ್ಸವನ್ನು ಸಾಹಿತಿ ಹಂಪ ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶ್ವ ವಿಖ್ಯಾತ ದಸರಾನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಇಂದು ಈ ವಿಚಾರದ ಕುರಿತು ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.
ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದ್ದು, ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅಕ್ಟೋಬರ್ 12ರಂದು ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ ಮತ್ತು ಕುದುರೆ ಪೂಜೆ ನೆರವೇರಲಿದೆ.
ದಸರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 13ರಂದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ.
ಹಂಪಾ ನಾಗರಾಜಯ್ಯ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ ಗ್ರಾಮದವರು. ಇವರನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಹಂಪನಾ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿದ್ದಾರೆ. ಹಂಪಾ ನಾಗರಾಜಯ್ಯ ಅವರು ಮಂಡ್ಯ, ಗೌರಿಬಿದನೂರು, ಮಧುಗಿರಿ, ತುಮಕೂರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮೈಸೂರು ವಿವಿಯಿಂದ ಎಂ.ಎ.ಪದವಿ ಮತ್ತು ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.