ಮಗುವಿಗೆ ಮತ್ತೆ ಉಸಿರುಕೊಟ್ಟ ವೈದ್ಯರಿಗೊಂದು ಸಲಾಂ
ಒಮ್ಮೆ ಹೃದಯ ಬಡಿತ ನಿಂತು ಹೋದರೆ ಬದುಕಿ ಬರುವ ಮಾತೆಲ್ಲಿ, ಆದರೆ ಈ ಮಗು ಸಾವನ್ನೂ ಗೆದ್ದು ಬಂದಿದೆ. ಸತತ 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿದ್ದರೂ, ವೈದ್ಯರು ಮಗುವನ್ನು ಬದುಕಿಸುವಲ್ಲಿ ಸಫಲರಾಗಿದ್ದಾರೆ. ಇದು ವೈದ್ಯಲೋಕದ ಅಚ್ಚರಿ ಎಂದೇ ಹೇಳಬಹುದು. ಹೋಂ ಡೇ ಕೇರ್ನ ಹೊರಾಂಗಣದಲ್ಲಿ ಆಡುತ್ತಿದ್ದ 20 ತಿಂಗಳ ಮಗು ಅರಿವಿಲ್ಲದೆ ಈಜುಕೊಳಕ್ಕೆ ಬಿದ್ದಿತ್ತು. ಪ್ರಜ್ಞೆ ತಪ್ಪಿತ್ತು, ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗು ನಿರ್ಜೀವವಾಗಿತ್ತು. ಈ ಘಟನೆ ನಡೆದಿದ್ದು, ಕೆನಡಾದಲ್ಲಿ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗುವಿನ ಹೃದಯ ಬಡಿತ ನಿಂತಿತ್ತು, ಆದರೂ ವೈದ್ಯರು ನೋಡಿಯೇ ಬಿಡೋಣ ಮಗು ಬದುಕಿದರೂ ಬದುಕಬಹುದು ಎಂದು ನಿರ್ಧಾರ ಮಾಡಿದರು. ಅಲ್ಲಿನ ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮಗುವನ್ನು ಉಳಿಸಲು ನಿರಂತರ ಪ್ರಯತ್ನ ಮಾಡಿ ಕೊನೆಗೂ ಮಗು ಬದುಕುಳಿದಿದೆ. ಪೋಷಕರು ಮಗುವಿಗೆ ಮರುಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.