ಶಿರೂರು ಭೂಕುಸಿತ: ನಾಪತ್ತೆಯಾದವರ ಪತ್ತೆ ಕಾರ್ಯ ಮುಂದುವರೆಸುವಂತೆ ರಾಜ್ಯಕ್ಕೆ ಕೇರಳ ಸಚಿವ ಮನವಿ

Sampriya

ಸೋಮವಾರ, 29 ಜುಲೈ 2024 (12:00 IST)
Photo Courtesy X
ಕಾರವಾರ: ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ ಅವರ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ನಿನ್ನೆ ಈಜು ತಜ್ಞ ಈಶ್ವರ್ ಮಲ್ಪೆ ಅವರ ತಂಡ ನಡೆಸಿದ ಶೋಧ ಕಾರ್ಯಚರಣೆ ವಿಫಲವಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಈಶ್ವರ ಮಲ್ಪೆ ಅವರು ಮೊದಲ ಬಾರಿ ನಮ್ಮ ಪ್ರಯತ್ನ ವಿಫಲವಾಗಿದೆ. ಲಾರಿ ಸುಮಾರು 50 ಅಡಿ ಅಳದಲ್ಲಿರುವ ಸಾಧ್ಯತೆಯಿದ್ದು, ನೀರಿನ ರಭಸ ಜಾಸ್ತಿಯಾಗಿದೆ. ಅದರ ಜತೆಗೆ ನೀರು ಕಲುಷಿತಗೊಂಡಿರುವುದರಿಂದ ನೀರಿನ ಒಳಗೆ ಏನೂ ಕಾಣುತ್ತಿಲ್ಲ. ನೀರು ತಿಳಿ ಆದ್ಮೇಲೆ ಅಷ್ಟೇ ಶೋಧ ಕಾರ್ಯ ನಡೆಸಬಹುದು ಎಂದು ಹೇಳಿದ್ದಾರೆ.

ಈ ಮೂಲಕ ಸರ್ಕಾರ ತಾತ್ಕಲಿಕವಾಗಿ ಇದೀಗ ಶೋಧ ಕಾರ್ಯವನ್ನು ಸ್ಥಗಿತ ಮಾಡಿದ್ದು, ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕೇರಳ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ನಿರಾಶೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ ರಿಯಾಸ್, ನೌಕಾ ನೆಲೆಯಿಂದ ಅತ್ಯುತ್ತಮ ಮುಳುಗು ತಜ್ಞರನ್ನು ನಿಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದರು. ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಇನ್ನೂ ಹಲವು ಸಾಧ್ಯತೆಗಳಿವೆ. ಎಲ್ಲರೂ ಚರ್ಚಿಸಿದ ನಿರ್ಣಯವನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.

ನಮ್ಮ ಜತೆ ಚರ್ಚಿಸದೆ ಈ ಶೋಧ ಕಾರ್ಯ ಸ್ಥಗಿತ ಮಾಡಿರುವುದು ಸರಿಯಲ್ಲ. ಬೇರೆ ರಾಜ್ಯವಾದ್ದರಿಂದ ನಮ್ಮ ಮಂತ್ರಿಗಳು ಅಲ್ಲಿ ಬೀಡು ಬಿಡುವಂತಿಲ್ಲ, ಆದರೆ ನಾವು ಅಲ್ಲಿಗೆ ಹೋಗಿದ್ದೆವು. ಒಬ್ಬ ನಾಗರಿಕನಾಗಿ ಪ್ರತಿಕ್ರಿಯಿಸುತ್ತಿದ್ದೇನೆ, ಸಚಿವನಾಗಿ ಅಲ್ಲ ಎಂದು ಅವರು ಹೇಳಿದರು.

ಅರ್ಜುನ್ ಅವರ ತಾಯಿ ಶೀಲಾ ಅವರು ರಕ್ಷಣಾ ಕಾರ್ಯವನ್ನು ಮುಂದುವರೆಸುವಂತೆ ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ