ಸದಾನಂದ ಗೌಡರ ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ: ಬೆಂಗಳೂರು ಉತ್ತರದಲ್ಲೂ ಗೋ ಬ್ಯಾಕ್ ಶೋಭಾ ಕೂಗು

Sampriya

ಗುರುವಾರ, 14 ಮಾರ್ಚ್ 2024 (13:34 IST)
Photo Courtesy: Twitter
ಬೆಂಗಳೂರು:  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಗೋ ಬ್ಯಾಕ್ ಶೋಭಾಕ್ಕ ಅಭಿಯಾನ ಬಿಸಿ ಎದುರಿಸಿದ್ದ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. ಆದರೆ ಇದೀಗ ಅಲ್ಲೋ ಶೋಭಾ ವಿರುದ್ಧ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಅಭಿಯಾನ ಶುರು ಮಾಡಿದ್ದಾರೆ. 
 
ಬೆಂಗಳೂರು ಉತ್ತರದಲ್ಲಿ ಟಿಕೆಟ್ ಸಿಕ್ಕ ಬೆನ್ನಲ್ಲೇ ಸಚಿವೆ ಶೋಭಾ ಅವರು ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ  ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿಯಾಗಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. 
 
ಭೇಟಿಯ ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಶೋಭಾ ಅವರು, 'ಮುಖಂಡರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ  ಡಿವಿ ಸದಾನಂದ ಗೌಡ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು, ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚಿಸಿ, ಸಂಪೂರ್ಣ ಸಹಕಾರ ಕೋರಲಾಯಿತು' ಎಂದು ಬರೆದುಕೊಂಡಿದ್ದಾರೆ. 
 
ಇಂದು ಉತ್ತರ ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಾಕ್ಕೆ ಅಭಿಯಾನ ನಡೆಯಿತು. ಈ ವೇಳೆ ಮಹಿಳೆಯೊಬ್ಬರು ಮಾತನಾಡಿ 'ಯಾವುದೇ ಕಾರಣಕ್ಕೂ ಶೋಭಾ ಅವರಿಗೆ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೊಡಬೇಡಿ. ಎಲ್ಲಿಂದಲೋ ಬಂದ ಅವರಿಗೆ ಇಲ್ಲಿಯ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಿಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಿದರೆ, ಅವರು ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸುತ್ತಾರೆ. ದಯವಿಟ್ಟು ಸ್ಥಳೀಯರಿಗೆ ಅವಕಾಶ ಕಲ್ಪಿಸಿ ಕೊಡಬೇಕು. ಮೋದಿ ಬೇಕು ಆದರೆ ಶೋಭಾಕ್ಕ ಬೇಡ ಎಂದು ಗೋ ಬ್ಯಾಕ್ ಶೋಭಾಕ್ಕ ಎಂಬ ಘೋಷಣೆಯನ್ನು ಕೂಗಿದರು.
 
ಇನ್ನೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸದೆಯಾಗಿ ಸಚಿವ ಶೋಭಾ ಕರಂದ್ಲಾಜೆ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ಮಾಡಿದ್ದರು. ಭಿತ್ತಿ ಪತ್ರ ಪ್ರದರ್ಶಿಸಿ ಆಕ್ರೋಶವನ್ನು ಹೊರ ಹಾಕಿದ್ದರು. ಅದಲ್ಲದೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಬಾರದೆಂಬ ಅಭಿಯಾನ ನಡೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಶೋಭಾ ಅವರು, ನಾನು ಫೈಟರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೇ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು.  ಆದರೆ ಅಲ್ಲಿಂದ್ದ ಅವರನ್ನು ಎತ್ತಂಗಡಿ ಮಾಡಲಾಗಿದೆ.  ಆ ಕ್ಷೇತ್ರದಲ್ಲಿ ವಿಧಾನ ಪರಿಷತ್ ವಿ‍ಪಕ್ಷ ನಾಯಕ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಮಣೆ ಹಾಕಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ