ಹುಕ್ಕಾ ಬಾರ್, ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಕೋಟ್ಪಾ ಕಾಯ್ದೆ ಗೆ ಮಹತ್ವದ ತಿದ್ದುಪಡಿ
ಮಂಗಳವಾರ, 19 ಸೆಪ್ಟಂಬರ್ 2023 (21:02 IST)
ಹುಕ್ಕಾ ಬಾರ್ ಸೇರಿದಂತೆ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನ ನಿಷೇಧಿಸಲು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕ್ರೀಡಾ ಸಚಿವ ನಾಗೇಂದ್ರ ಅವರ ಜೊತೆಗೂಡಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್, ಸಾರ್ವಜನಿಕ ಸ್ಥಳಗಳಲ್ಲಿ ಇತರ ತಂಬಾಕು ಉತ್ಪನ್ನಗಳ ನಿಷೇಧಿಸುವ ಬಗ್ಗೆ ಚರ್ಚಿಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವೆನೆಯನ್ನ ಶಾಲೆಗಳ ಜೊತೆಗೆ, ದೇವಸ್ಥಾನಗಳು, ಆಸ್ಪತ್ರೆಗಳ ಸುತ್ತ ಮುತ್ತಲು ನಿಷೇಧಿಸುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಕೋಟ್ಪಾ ಕಾಯ್ದೆಗೆ ತಿದ್ದುಪಡಿಗೆ ಸೂಚಿಸಿರೋದಾಗಿ ತಿಳಿಸಿದರು. ಈ ಹಿಂದಿನ ಕೋಟ್ಪಾ ಕಾಯ್ದೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆಯನ್ನ ನಿಷೇಧಿಸಲಾಗಿತ್ತು. ಸಿಗರೇಟ್ ಜೊತೆಗೆ ಇತರ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟವನ್ನ ನಿಷೇಧಿಸುವ ನಿಟ್ಟಿನಲ್ಲಿ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದರು.
ಹುಕ್ಕಾ ಬಾರ್ ಗಳಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹುಕ್ಕಾ ಬಾರ್ ಗಳಲ್ಲಿ ಮಾದಕ ವಸ್ತುಗಳ ಸೇವನೆಯನ್ನ ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಹುಕ್ಕಾ ಬಾರ್ ಗಳಿಗೆ ನಿಯಂತ್ರಣ ಹೇರುವಲ್ಲಿ ಕ್ರೀಡಾ ಸಚಿವ ನಾಗೇಂದ್ರ ಅವರು ಕೆಲವು ಸಲಹೆ ನೀಡಿದ್ದು, ಕೋಟ್ಪಾ ಕಾಯ್ಸೆ ತಿದ್ದುಪಡಿಯಲ್ಲಿ ಹುಕ್ಕಾ ಬಾರ್ ಗಳಲ್ಲಿ ನಡೆಯುವ ಮಾದಕ ವಸ್ತುಗಳ ಸೇವನೆಗೆ ನಿಷೇಧ ಹೇರಲು ಕ್ರಮ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಂಬಾಕು ಖರೀದಿಗೆ 18 ವರ್ಷದ ಮೇಲ್ಪಟ್ಟವರಿಗೆ, ಕಾನೂನನಲ್ಲಿ ಇದ್ದ ಅವಕಾಶವನ್ನ ಪರಿಷ್ಕರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. 18 ವರ್ಷದ ಬದಲು 21 ವರ್ಷದ ಮೇಲ್ಪಟ್ಟವರು ಎಂದು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಈ ಮೂಲಕ 21 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಖರೀದಿಗೆ ನಿಷೇಧ ಹೇರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಶಾಲೆ, ಕಾಲೇಜು, ಆಸ್ಪತ್ರೆ, ಶಿಶುಪಾಲನಾ ಕೇಂದ್ರಗಳು, ಹೆಲ್ತ್ ಕೇರ್ ಸೆಂಟರ್, ದೇವಸ್ಥಾನಗಳು, ಮಂದಿರಿಗಳು, ಮಸೀದಿಗಳು, ಉದ್ಯಾನವನ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ.
ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ಇಂದಿನ ಯುವಜನತೆ ತಮ್ಮ ಅಮೂಲ್ಯ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಬುಡಸಮೇತ ಕಿತ್ತೆಸೆಯುವ ಗಟ್ಟಿ ನಿರ್ಧಾರವನ್ನ ಮಾಡಿದ್ದೇವೆ.
ತಂಬಾಕು ಸೇವನೆಯ ಬಳಿಕ ಯುವಕರು ಡ್ರಗ್ಸ್, ಮಾದಕ ವಸ್ತುಗಳ ವ್ಯಸನಗಳತ್ತ ಆಕರ್ಷಿತರಾಗುತ್ತಿದ್ದರು. ಇದಕ್ಕೆಲ್ಲಾ ತಂಬಾಕು ಸೇವನೆಯೇ ಒಂದು ರೀತಿಯಲ್ಲಿ ಅಡಿಪಾಯ ಹಾಕಿ ಕೊಡುತ್ತಿತ್ತು. ಹೀಗಾಗಿ ಮೂಲದಲ್ಲೇ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.