ಬೆಂಗಳೂರು: 34 ದಿನಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸ್ನೇಹಿತೆ ನೆರವಾಗಿರುವ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.
ಹಲವು ಮಹಿಳೆಯರಿಗೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಎಸ್‌ಐಟಿಗೆ ಬೇಕಾಗಿದ್ದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿ ತಲೆಮರೆಸಿಕೊಂಡಿದ್ದರು. ಈ ವೇಳೆ ಅವರಿಗೆ ಗರ್ಲ್‌ಫ್ರೆಂಡ್ ನೆರವಾಗಿರುವ ಬಗ್ಗೆ ಎಸ್‌ಐಟಿ ತನಿಖೆ ವೇಳೆ ಹೇಳಿಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದ ಹಾಗೇ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆಯಿತು. ಇದರ ಬೆನ್ನಲ್ಲೇ ಪ್ರಜ್ವಲ್ ಅವರು ಜರ್ಮನಿಗೆ ಪ್ರಯಾಣ ಬೆಳೆಸಿ ತಲೆಮರೆಸಿಕೊಂಡಿದ್ದರು. ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಎಚ್ ರೇವಣ್ಣ ವಿರುದ್ಧ ಸಂತ್ರಸ್ತೆಯರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಯಿತು.
ಇನ್ನೂ ಪ್ರಕರಣದ ಬಿಸಿ ಜೋರಾಗುತ್ತಿದ್ದ ಹಾಗೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿ ವಹಿಸಿತು. ತನಿಖೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ಎರಡು ಬಾರಿ ಎಸ್‌ಐಟಿ ನೋಟಿಸ್ ನೀಡಿದರು ಅದಕ್ಕೆ ಕ್ಯಾರೇ ಎನ್ನಲಿಲ್ಲ. ಆದರೆ 34 ದಿನಗಳ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ತನಿಖೆಯಲ್ಲಿ ಪ್ರಜ್ವಲ್ ರೇವಣ್ಣಗೆ ಗರ್ಲ್‌ಫ್ರೆಂಡ್ ಸಹಾಯ ಕೋರಿರುವುದಾಗಿ ತಿಳಿದುಬಂದಿದೆ. ಅದಲ್ಲದೆ ಎಸ್‍ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ದಾಖಲೆಗಳಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ಕೋರಿ ಎಸ್‍ಐಟಿ ಅಧಿಕಾರಿಗಳು ಪ್ರಜ್ವಲ್ ಗರ್ಲ್‍ಫ್ರೆಂಡ್‍ಗೆ ನೋಟಿಸ್ ಕೊಟ್ಟಿದೆ.