ಕರ್ನಾಟಕದಲ್ಲಿ ಮೊದಲ ಬಾರಿಗೆ ಅಪಾರ್ಟ್ ಮೆಂಟ್ ನ ಮೇಲ್ಚಾವಣಿ ಮೇಲೆ ಸೌರ ವಿದ್ಯುತ್ ಸ್ಥಾವರ
ಶನಿವಾರ, 9 ಅಕ್ಟೋಬರ್ 2021 (21:07 IST)
ಇದೇ ಮೊದಲ ಬಾರಿಕೆ ನಮ್ಮ ಬೆಂಗಳೂರಿನ ಅಪಾರ್ಟ್‌ಮೆಂಟ್ ಸಂಕೀರ್ಣಗಳ ಮೇಲ್ಞಾವಣೆಯ ಮೇಲೆ ಬೃಹತ್ ಸೌರ ಫಲಕಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಮುಗಿದಿದ್ದು, ಬೆಂಗಳೂರಿನ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘ (BGAOA) ಸುಸ್ಥಿರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಈ ನವೀನ ಸೌರವಿದ್ಯುತ್ ಮೂಲಗಳ ಅಳವಡಿಕೆ ಕಾರ್ಯಕ್ರಮ ದಿನಾಂಕ ೦೯/೧೦/೨೦೨೧ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನೆಯಾಗಲಿದೆ. RenXSol Ecotech Pvt. Ltd. ಸಂಸ್ಥೆ ನಿರ್ಮಿಸಿರುವ ಈ ಸೋಲಾರ್ ಮೇಲ್ಚಾವಣಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವರಾದ ಡಾ ಸಿ.ಎನ್ ಅಶ್ವಥ್ ನಾರಾಯಣ್ ಅವರು ಉದ್ಘಾಟಿಸಲಿದ್ದಾರೆ.
ಸುಸ್ಥಿರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅಳವಡಿಕೆಯಲ್ಲಿ ಈಗ ಕ್ರಾಂತಿಕಾರಕ ಕಾರ್ಯಕ್ಕೆ ನಮ್ಮ ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘವೊಂದು ಮುನ್ನುಡಿ ಬರೆದಿದೆ. ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ದೊಡ್ಡ ಪ್ರಮಾಣದ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರವನ್ನು ಯಶಸ್ವಿಯಾಗಿ ಅಳವಡಿಕೆಯಾಗಿದೆ. ಯಶವಂತಪುರದ ಬ್ರಿಗೇಡ್ ಗೇಟ್ ವೇ ಬಳಿಯಿರುವ ಮಲ್ಲೇಶ್ವರಂ ವೆಸ್ಟ್ ಬ್ರಿಗೇಡ್ ಗೇಟ್ ವೇ ಅಪಾರ್ಟ್ಮೆಂಟ್ ಮಾಲೀಕರ ಸಂಘ ಈ ತರಹದ್ದೊಂದು ಅಭೂತಪೂರ್ವ ಕಾರ್ಯಕ್ಕೆ ಮುಂದಾಗಿದೆ. ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ನ 13 ಹೈ-ರೈಸ್ ಟವರ್‌ಗಳ ಮೇಲೆ ಭಾರತದ ಅತಿದೊಡ್ಡ ಮೇಲ್ಛಾವಣಿ ಸೋಲಾರ್ ಪ್ಲಾಂಟ್ ಕಾರ್ಯಾರಂಭ ಮಾಡಿದೆ. ಇದು ಅಪಾರ್ಟ್‌ಮೆಂಟ್ ಸಂಕೀರ್ಣಗಳ ಮೇಲೆ ನಿರ್ಮಿಸಲಾಗಿರುವ ಅತಿ ದೊಡ್ಡ ಸೋಲಾರ್ ಪ್ಲಾಂಟ್ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದು, ಬೆಂಗಳೂರಿನ ಗ್ರೀನ್ ಇನಿಶಿಯೇಟಿವ್ ಅಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪಾರ್ಟ್‌ಮೆಂಟ್ ವಸತಿ ನಿವಾಸಗಳು ತಮ್ಮ ಮೇಲ್ಛಾವಣಿಯ ಮೇಲೆ ಬೃಹತ್ ಸೌರಫಲಕಗಳನ್ನು ಅಳವಡಿಸಿದ್ದಾರೆ. ಸೌರ ಬಳಕೆಯನ್ನು ದೀರ್ಘಾವಧಿಯಲ್ಲಿ ರಕ್ಷಿಸುವ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ವಿಶ್ವಾಸಾರ್ಹತೆಯುಳ್ಳ ಜಾಗತಿಕ ಸೌರ ಇಂಧನ ಉತ್ಪಾದಕರಿಂದ ಸೋಲಾರ್ ಪ್ಲಾಂಟ್ ಅಳವಡಿಸಲಾಗಿದೆ. ೨೫ ವರ್ಷಗಳ ದೀರ್ಘ ಬಾಳಿಕೆ ಬರಬಹುದಾದ ಸೋಲಾರ್ ಇನ್ವರ್ಟರ್‌ಗಳು ಮತ್ತು ಸೌರ ಫಲಕಗಳನ್ನು ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಪ್ಲಾಂಟ್ ಮಾಡಲಾಗಿದೆ.
ಬೆಂಗಳೂರಿನ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘ (BGAOA) ಬೆಂಗಳೂರಿನ ವಸತಿ ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿ ಅತಿದೊಡ್ಡ ಮೇಲ್ಛಾವಣಿ ಸೋಲಾರ್ ದ್ಯುತಿವಿದ್ಯುಜ್ಜನಕ ವಿದ್ಯುತ್ ಸ್ಥಾವರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಿರುವುದಾಗಿ ಹೆಮ್ಮೆಯಿಂದ ಘೋಷಿಸಿದೆ. REC-ಸಿಂಗಾಪುರ್ ಸೋಲಾರ್ ಪ್ಯಾನಲ್ ಸೌಕರ್ಯ ಮತ್ತು Enphase-USA ಸೋಲಾರ್ ಮೈಕ್ರೊಇನ್‌ವರ್ಟರ್‌ಗಳ ಸಹಯೋಗದೊಂದಿಗೆ, ಬೆಂಗಳೂರು ಮೂಲದ ರೈನ್‌ಎಕ್ಸ್‌ಸೋಲ್ ಇಕೋಟೆಕ್ ಪ್ರೈವೆಟ್ ಲಿಮಿಟೆಡ್ (RenXSol Ecotech Pvt. Ltd) ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಬೃಹತ್ ಸೋಲಾರ್ ಪ್ಲಾಂಟ್ ಅಳವಡಿಸಿದ್ದಾರೆ. ಚೆನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದ್ದ ಸಹ ಇದೇ ರೈನ್‌ಎಕ್ಸ್‌ಸೋಲ್ ಸಂಸ್ಥೆ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಆಧುನಿಕ ತಾಂತ್ರಿಕತೆಯ ವೇಗದಲ್ಲಿ ನಾಗಾಲೋಟದಿಂದ ಚಲಿಸುತ್ತಿರುವ ವಿಶ್ವದರ್ಜೆಯ ನಗರಿ ಬೆಂಗಳೂರಿನಲ್ಲಿ ಈ ಬಗೆಯ ಸುಸ್ಥಿರ ಅಭಿವೃದ್ಧಿಯ ಪರಿಕ್ರಮಗಳು ನಿಜಕ್ಕೂ ಶ್ಲಾಘನೀಯವೆಂದು ವರ್ಣಿಸಲಾಗುತ್ತಿದೆ. ಈ ರೀತಿಯ ಪ್ರಕೃತಿ ಪ್ರಣೀತ ಅಭಿವೃದ್ಧಿ ಭವಿಷ್ಯದ ದೃಷ್ಟಿಕೋನದಲ್ಲಿ ಹೆಚ್ಚಿನ ಮಹತ್ವ ಗಳಿಸಿಕೊಂಡಿದೆ.
ರೈನ್‌ಎಕ್ಸ್‌ಸೋಲ್ ಸಂಸ್ಥೆಯ ಸಹಕಾರದಿಂದ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳಲ್ಲಿ 354.4 ಕಿಲೋ ವ್ಯಾಟ್ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಯಶಸ್ವಿ ಪರೀಕ್ಷೆ, ಏಕೀಕರಣ ಮತ್ತು ಸಿಂಕ್ರೊನೈಸೇಶನ್‌ನೊಂದಿಗೆ ಕೋವಿಡ್ ಲಾಕ್‌ಡೌನ್‌ಗಳ ಹೊರತಾಗಿಯೂ 45-75 ದಿನಗಳ ದಾಖಲೆಯ ಅವಧಿಯಲ್ಲಿ ಪೂರ್ಣಗೊಳಿಸಿ, 9, ಸೆಪ್ಟೆಂಬರ್, 2021ರಂದು ಕಾರ್ಯಾರಂಭ ಮಾಡಿದೆ. 1255 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ ಗೂ 13 ಕ್ಕೂ ಹೆಚ್ಚು ವಸತಿ ಗೋಪುರಗಳಿರುವ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳ ಈ ಸೋಲಾರ್ ಮೇಲ್ಛಾವಣಿಯ ಸ್ಥಾಪನೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಗತಗೊಳಿಸಿರುವ ಒಂದು ಬೃಹತ್ ಸೋಲಾರ್ ಪ್ಲಾಂಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
400Wp, 72 ಸೆಲ್‌ಗಳು, Enphase-USA ನಿರ್ಮಿತ ಸೋಲಾರ್ ಮೈಕ್ರೋ ಇನ್ವರ್ಟರ್‌ಗಳ ಜೊತೆ ಮೊನೊ PERC ಕ್ರಿಸ್ಟಲಿನ್ ಟೆಕ್ನಾಲಜಿ ಸೋಲಾರ್ ಪ್ಯಾನಲ್‌ಗಳು REC- ಸಿಂಗಾಪುರ್ ನಲ್ಲಿ ತಯಾರಿಸಲಾದ 354.4 kW ಮೇಲ್ಛಾವಣಿಯ ಸೌರ ವಿದ್ಯುತ್ ಸ್ಥಾವರ ವ್ಯವಸ್ಥೆಯ ವಿಶೇಷವಾಗಿದೆ. ಇದರಲ್ಲಿ ಪ್ರತಿ ಸೋಲಾರ್ ಪ್ಯಾನಲ್‌ನಲ್ಲಿ ಒಂದು ಮೈಕ್ರೋ ಇನ್ವರ್ಟರ್ ಅಳವಡಿಸಲಾಗಿದೆ. ಹೀಗಾಗಿ ಅತ್ಯುತ್ತಮ ಸೌರಶಕ್ತಿ ಉತ್ಪಾದನೆಗೆ ಪ್ರತ್ಯೇಕವಾಗಿ ಸೋಲಾರ್ ಪ್ಯಾನಲ್‌ನ ಹಿಂದೆ ಎಸಿ ಔಟ್ ಪುಟ್ ಒದಗಿಸುತ್ತದೆ. ತನ್ಮೂಲಕ ಡಿಸಿ ವೋಲ್ಟೇಜ್ ಅನ್ನು ಪ್ಯಾನಲ್ ಮಟ್ಟಕ್ಕೆ ಮಾತ್ರ ಕಡಿಮೆ ಮಾಡುತ್ತದೆ. ಜಾಗತಿಕವಾಗಿ ಚಾಲ್ತಿಯಲ್ಲಿರುವ ವಿವಿಧ ಇನ್ವರ್ಟರ್ ತಂತ್ರಜ್ಞಾನಗಳಲ್ಲೇ ಇದು ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ ಎನ್ನಲಾಗುತ್ತಿದೆ. ಇದನ್ನು ವಸತಿ ಜಾಗಗಳಲ್ಲಿ ಅಳವಡಿಸಬಹುದಾದ ಉನ್ನತ ಮಟ್ಟದ ಅಗ್ನಿಶಾಮಕ ಸುರಕ್ಷತೆಯನ್ನು ಇದು ಹೊಂದಿದೆ ಎಂದು ಪ್ರಶಂಸಿಸಲಾಗಿದೆ. ನೆಟ್ ಮೀಟರಿಂಗ್ ಸೋಲಾರ್ ಪಾಲಿಸಿಯ ಅಡಿಯಲ್ಲಿ ಕೆಇಆರ್‌ಸಿ ಮತ್ತು ಬೆಸ್ಕಾಂ ಮಾರ್ಗಸೂಚಿಗಳ ಪ್ರಕಾರ ಇದನ್ನು ಬೈ ಡೈರೆಕ್ಷನಲ್ ಮೀಟರಿಂಗ್ ಮೂಲಕ ಸ್ಥಳಾಂತರಿಸಲಾಗಿದೆ. ಕರ್ನಾಟಕ ಸರ್ಕಾರ ಮತ್ತು ಬೆಸ್ಕಾಂ ಹಸಿರು ಶಕ್ತಿ ಮತ್ತು ಸೌರಶಕ್ತಿ ಬಳಕೆಯನ್ನು ಉತ್ತೇಜಿಸುವಲ್ಲಿ ಈ ತಂತ್ರಜ್ಞಾನ ಮುಂಚೂಣಿಯಲ್ಲಿದೆ. ಒಂದು ಅಂದಾಜಿನ ಪ್ರಕಾರ ಬ್ರಿಗೇಡ್ ಗೇಟ್ ವೇ ರೂಫ್ ಟಾಪ್ ಪವರ್ ಪ್ಲಾಂಟ್‌ನಲ್ಲಿ ಉತ್ಪತ್ತಿಯಾಗುವ ನವೀಕರಿಸಬಹುದಾದ ವಿದ್ಯುತ್ ಅಂದಾಜು ವಾರ್ಷಿಕ ಉತ್ಪಾದನೆಗೆ 4.78 ಲಕ್ಷ ಯೂನಿಟ್ಗಳು. ಅಂದರೆ ಪ್ರಸ್ತುತ ಅಂದಾಜು ಬಳಕೆಯ ಶೇ.69%ವರೆಗೆ ಇಂಧನ ಉಳಿಸಲು ಮತ್ತು ವಾರ್ಷಿಕವಾಗಿ 530 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ ಎನ್ನುತ್ತಾರೆ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಶ್ರೀ ಮಹೇಶ್ ಕುಮಾರ್ ಎನ್ ಎಲ್.
ಈ ಬೃಹತ್ ಹಸಿರು ಶಕ್ತಿ ಉಪಕ್ರಮ ವಿದ್ಯುತ್ ಬಿಲ್ ಉಳಿತಾಯದ ಜೊತೆಗೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ "ಇಂಧನ ಉಳಿತಾಯ, ನವೀಕರಿಸಬಹುದಾದ ಇಂಧನ ಉತ್ಪಾದಿನೆ" ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಉಳಿತಾಯದ ಶಕ್ತಿಯ ಉದ್ಯಮದ ಅಗತ್ಯವಿರುವ ಇತರ ಪ್ರದೇಶಗಳಲ್ಲಿ ಅಥವಾ ರೈತರು ಅಥವಾ ಇತರ ವಸತಿ ನಿವಾಸಗಳಲ್ಲಿ ಇಂಧನ ಉತ್ಪಾದನೆಗೆ ಬಳಸಲು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ. ಇಂದು, ಭಾರತ ಮತ್ತು ಅದರ ಸೌರಶಕ್ತಿ ಅವಕಾಶಗಳು ಸಂಪೂರ್ಣ ತಾಂತ್ರಿಕ ಸಾಮರ್ಥ್ಯ, ವಿಶ್ವಾಸಾರ್ಹತೆ ಹೊಂದಿವೆ. ಅನನ್ಯ ಸೌರವಿನ್ಯಾಸ, ಅತ್ಯುತ್ತಮ ಎಂಜಿನಿಯರಿಂಗ್ ಕೌಶಲ್ಯ ಮತ್ತು ಪರಿಪೂರ್ಣ ತರಬೇತಿ ಪಡೆದ ಮಾನವ ಸಂಪನ್ಮೂಲ ವಿಶ್ವದಲ್ಲೇ ಅತ್ಯುತ್ತಮವಾದ ಸೋಲಾರ್ ಪರಿಹಾರಗಳನ್ನು ಒದಗಿಸಲು ಮತ್ತು ದೀರ್ಘಾವಧಿಯ ಬಳಕೆಗಾಗಿ ಸ್ಪರ್ಧಿಸಲು ಸಮರ್ಥವಾಗಿದೆ. ಎಸ್ಕಾಂನ ಎಲ್ಲಾ ಗ್ರಾಹಕರಿಗೆ ಗ್ರಿಡ್ ಪವರ್ ಬಳಸಿ ವರ್ಷದಲ್ಲಿ ಕನಿಷ್ಠ 300 ದಿನಗಳವರೆಗೆ ಸೌರ ವಿದ್ಯುತ್ ಮೂಲಕ ತಮ್ಮ ದಿನದ ವಿದ್ಯುತ್ ಬಳಕೆಯಲ್ಲಿ ಭಾರೀ ಉಳಿತಾಯ ಗಳಿಸಿ ಮತ್ತು ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದೆ. ಇನ್ನು ಡೀಸೆಲ್ ಜನರೇಟರ್‌ಗಳನ್ನು ಬಳಸುವ ಗ್ರಾಹಕರು ಸಹ ಸೌರಶಕ್ತಿ ಅಳವಡಿಸಿಕೊಂಡು ಉಳಿತಾಯದ ಜೊತೆ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಈಗಾಗಲೆ ಅಸ್ತಿತ್ವದಲ್ಲಿರುವ ಗ್ರಿಡ್ ಅಥವಾ ಡೀಸೆಲ್ ಜೆನ್‌ಸೆಟ್‌ಗಳೊಂದಿಗೆ ಸೌರಶಕ್ತಿ ಸಂಯೋಜನೆಯ ಸಿಂಕ್ರೊನೈಸೇಷನ್ ನಿಂದ ಕನಿಷ್ಠ 0.99 ಪ್ಲಸ್ ಅಧಿಕ ವಿದ್ಯುತ್ ಉಳಿಕೆ ಸಾಧ್ಯವಿದೆ.
ನೆಟ್ ಮೀಟರ್ ವ್ಯವಸ್ಥೆ ಗ್ರಿಡ್ ಅನ್ನು ಬ್ಯಾಟರಿಯ ಬಳಕೆಯಿಲ್ಲದೆ ಬಳಸಬಹುದಾಗಿದ್ದು, ಹೆಚ್ಚುವರಿ ವಿದ್ಯುತ್ ಶಕ್ತಿಐ ಉತ್ಪಾದನೆಯೊಂದಿಗೆ ಆದಾಯದ ಉಳಿಕೆ ಮತ್ತು ಗಳಿಕೆಗೆ ನೆರವಾಗಲಿದೆ. ಕರ್ನಾಟಕ ಸರ್ಕಾರವೂ ಸಹ ರಾಜ್ಯದಲ್ಲಿ ಅತ್ಯಂತ ಆಕರ್ಷಕವಾಗಿ ಸೋಲಾರ್ ಅಳವಡಿಸಿಕೊಳ್ಳುವ ಆದರ್ಶ ಸೌರನೀತಿ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತಿದೆ. ಸೋಲಾರ್ ಅಳವಡಿಸುವ ಮೂಲಕ, ಪ್ರತಿಯೊಬ್ಬ ನಾಗರಿಕ ಅಥವಾ ಕಂಪನಿ ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಬಹುದು. ಇದು ಪರೋಕ್ಷವಾಗಿ ರಾಜ್ಯ ಸರ್ಕಾರ ಇಂಧನ ಹೊರೆಯನ್ನು ತಗ್ಗಿಸುತ್ತದೆ ಹಾಗೂ ಇಂಧನಕ್ಕಾಗಿ ಹೊಸ ಮೂಲಸೌಕರ್ಯಗಳನ್ನು ಸ್ಥಾಪಿಸುವಲ್ಲಿ ದೊಡ್ಡ ಮೊತ್ತವನ್ನು ವಿನಿಯೋಗಿಸುವುದನ್ನು ತಪ್ಪಿಸುತ್ತದೆ. ಇಂಧನ ಕೊರತೆಯಿರುವ ಪ್ರದೇಶಗಳಿಗೆ ಮತ್ತು ರೈತರಿಗೆ ಹೀಗೆ ಉಳಿಸಲ್ಪಟ್ಟ ವಿದ್ಯುತ್ ಶಕ್ತಿ ಸರ್ಕಾರ ಉಚಿತವಾಗಿ ನೀಡಲು ಈ ರೀತಿಯ ಕ್ರಮಗಳು ಬಹು ಪ್ರಯೋಜನಕಾರಿಯಾಗಿವೆ.
ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮಾಲೀಕರ ಸಂಘದ ಈ ನವೀನ ಮತ್ತು ಸುಸ್ಥಿರ ಅಭಿವೃದ್ಧಿ ಉಪಕ್ರಮದ ಕುರಿತು ಪ್ರತಿಕ್ರಿಯಿಸಿರುವ ರೆನ್ಎಕ್ಸ್‌ಸೋಲ್ ಇಕೋಟೆಕ್ ಸಂಸ್ಥೆಯ ಸಿಇಒ ಶ್ರೀನಿವಾಸ್ ಕುಮಾರ್, "ಹಸಿರು ಮೂಲಸೌಕರ್ಯವನ್ನು ನಿರ್ಮಿಸಲು ಅಪಾರ್ಟ್‌ಮೆಂಟ್ ಸಂಘದ ಜೊತೆ ಪಾಲುದಾರಿಕೆ ಹೊಂದಿದ್ದಕ್ಕೆ ತಮಗೆ ಸಂತೋಷವಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಬೆಂಗಳೂರು ಅಥವಾ ಭಾರತದಲ್ಲಿ ಅಪಾರ್ಟ್‌ಮೆಂಟ್ ಛಾವಣಿಯ ಮೇಲ್ಭಾಗದ ಜಾಗ ಅಥವಾ ವಸತಿ ಮೇಲ್ಛಾವಣಿಯ ಜಾಗವನ್ನು ಹೇಗೆ ಸೋಲಾರ್ ಶಕ್ತಿಯ ಉತ್ಪಾದನೆಗೆ ಉಪಯೋಗಿಸಬಹುದು ಎನ್ನುವುದನ್ನು ಸಾಬೀತು ಮಾಡಿದಂತಾಗಿದೆ ಎಂದಿದ್ದಾರೆ. ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಂಧನ ಉತ್ಪದನೆ ಮಾಡುವ ಮೂಲಕ ನಾವು ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡಬಹುದಾಗಿದೆ. ಭವಿಷ್ಯದಲ್ಲಿ ಸೌರವಿದ್ಯುತ್ ನಮ್ಮ ಏಕೈಕ ನವೀಕರಿಸಬಹುದಾದ ಶಕ್ತಿ ಮೂಲವಾದ ಕಾರಣ ಸಾಧ್ಯವಾದಷ್ಟು ನಾವು ನಮ್ಮ ಸಂಪನ್ಮೂಲಗಳನ್ನು ಬಳಸಿಕೊಳ್ಳುವತ್ತ ಚಿಂತಿಸಬೇಕು ಎಂದಿದ್ದಾರೆ.
ಅಪಾರ್ಟ್‌ಮೆಂಟ್ ಸಂಘದ ವ್ಯವಸ್ಥಾಪಕ ಮಂಡಳಿಯ ಕೆ. ಪ್ರವೀಣ್ ಕುಮಾರ್ ಪ್ರತಿಕ್ರಯಿಸಿ, “ಬೆಂಗಳೂರಿನ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ 354.4 kW ಛಾವಣಿಯ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪನೆಯ ಕಾರ್ಯದಿಂದ 218 ಮನೆಗಳಿಗೆ ಪರ್ಯಾಯ ಇಂಧನ ಮೂಲ ವ್ಯವಸ್ಥೆ ಮಾಡಿದ್ದೇವೆ. ಸೌರಶಕ್ತಿಯನ್ನು ಅಳವಡಿಸಿಕೊಂಡರೆ ಗ್ರಾಮೀಣ ಅಥವಾ ಉಪ ನಗರ ಪ್ರದೇಶಗಳಲ್ಲಿ ಪ್ರತಿದಿನ 6 ಯೂನಿಟ್ ಅಥವಾ ತಿಂಗಳಿಗೆ 180 ಯುನಿಟ್ ವಿದ್ಯುತ್ ಬಳಸುವ ಮೂಲಕ ನಾವು ಇಂಗಾಲದ ರಸೂಸುವಿಕೆಯಿಂದಾಗುವ ಪ್ರಕೃತಿಯ ಅಪಾಯವನ್ನು ತಪ್ಪಿಸಬಹುದು” ಎಂದಿದ್ದಾರೆ. ಈ ಸಂದರ್ಭದಲ್ಲಿ ನವೀಕರಿಸುವ ಪರ್ಯಾಯ ಸೌರಶಕ್ತಿಯ ಅಳವಡಿಕೆಗೆ ಸಹಾಯ ಮಾಡಿದ ರೆನ್ಎಕ್ಸ್‌ಸೋಲ್ ಇಕೋಟೆಕ್ ಸಂಸ್ಥೆ ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.