ವಿದ್ಯಾರ್ಥಿನಿಗೆ ಆಟೋ ಚಾಲಕನಿಂದ ಕಿರುಕುಳ
ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ, ಕಿರುಕುಳದಂಥ ಸಮಸ್ಯೆಗಳು ದಿನೇದಿನೇ ಹೆಚ್ಚುತ್ತಿವೆ. ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಮರೆಯಾಗುತ್ತಿದೆ. ದಿನವೂ ಒಂದಿಲ್ಲ ಒಂದು ಇಂಥ ಘಟನೆಗಳು ನಡೆಯುತ್ತಿದ್ದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಹಾರಾಷ್ಟ್ರದ ಥಾಣೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಆಟೋ ಚಾಲಕನೊಬ್ಬ ಹಾಡುಹಗಲೇ ಕಿರುಕುಳ ನೀಡಿದ್ದಾನೆ. ತನ್ನ ಆಟೋಗುಂಟ ಸುಮಾರು 500 ಮೀಟರಿನಷ್ಟು ಆಕೆಯನ್ನು ದರದರನೆ ಎಳೆದೊಯ್ದಿದ್ದಾನೆ. ಈ ಆತಂಕಕಾರಿ ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಘಟನೆ ನಿನ್ನೆ ನಡೆದಿದ್ದು, ಇನ್ಸ್‌ಪೆಕ್ಟರ್ ಜೈರಾಜ್ ರಾಣಾ ಪ್ರಕಾರ ಆಟೋ ಚಾಲಕ ಆಕೆಗೆ ಛೇಡಿಸಿದ್ದಾನೆ. ಆ ಕುರಿತು ಆಕೆ ಅವನನ್ನು ಪ್ರಶ್ನಿಸಿದಾಗ ಆಕೆಯ ಕೈಹಿಡಿದಿದ್ದಾನೆ. ಆಕೆ ಅವನ ಕೈಬಿಡದೇ ಇದ್ದಾಗ ತನ್ನ ಆಟೋಗುಂಟ ಎಳೆದೊಯ್ದಿದ್ದಾನೆ. ಕೊನೆಗೂ ಆತ ಆಕೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ರಾಣಾ ತಿಳಿಸಿದ್ದಾರೆ.