ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣಾ ನಿಧಿ ಬಗ್ಗೆ ಸ್ಪಷ್ಟ ಮಾಹಿತಿ ಅಗತ್ಯವಿದ್ದು, ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ ಈ ಐತಿಹಾಸಿಕ ತೀರ್ಪು ನೀಡಿದೆ. ಚುನಾವಣಾ ಬಾಂಡ್ ಸಿಂಧುತ್ವದ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ರಾಜಕೀಯ ಪಕ್ಷಗಳು ಪಡೆಯುವ ಹಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸುಪ್ರೀಂ ಹೇಳಿದೆ.
ಚುನಾವಣಾ ಬಾಂಡ್ ಯೋಜನೆಯ ಪ್ರಕಾರ ಭಾರತದ ಯಾವುದೇ ನಾಗರಿಕ ಅಥವಾ ದೇಶದಲ್ಲಿ ಸ್ಥಾಪಿಸಲಾದ ಯಾವುದೇ ಘಟಕದಿಂದ ಚುನಾವಣಾ ಬ್ಯಾಂಡ್ ಗಳನ್ನು ಖರೀದಿಸಬಹುದಾಗಿದೆ. ಯಾವುದೇ ವ್ಯಕ್ತಿ ಏಕಾಂಗಿಯಾಗಿ ಅಥವಾ ಇತರೆ ವ್ಯಕ್ತಿಗಳ ಸಹಯೋಗದಲ್ಲಿ ಬಾಂಡ್ ಖರೀದಿಸಬಹುದು.
ಚುನಾವಣಾ ಬಾಂಡ್ ಎಂದರೇನು?
ಜನ ಸಾಮಾನ್ಯರು ಅಥವಾ ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಾಗಿದೆ. 1000 ರೂ., 10,000 ರೂ. 1 ಲಕ್ಷ ರೂ. ಅಥವಾ 10 ಲಕ್ಷ ರೂ. ಇಲ್ಲವೇ 1 ಕೋಟಿ ರೂ. ಮುಖಬೆಲೆಯ ಬಾಂಡ್ ಗಳನ್ನು ಖರೀದಿಸಬಹುದಾಗಿದೆ. ಈ ಬಾಂಡ್ ಅನಾಮಧೇಯವಾಗಿರುತ್ತದೆ. ಖರೀದಿಸಿದ ಮತ್ತು ನೀಡಿದ ವ್ಯಕ್ತಿಯ ಹೆಸರು ಗೌಪ್ಯವಾಗಿರುತ್ತದೆ. ಯಾವ ರಾಜಕೀಯ ಪಕ್ಷಕ್ಕೆ ನೀಡಲಾಗಿದೆ ಎಂಬ ಮಾಹಿತಿಯೂ ಇರುವುದಿಲ್ಲ.
ಇತ್ತೀಚೆಗೆ ಚುನಾವಣೆಯಲ್ಲಿ ಶೇ.1 ಕ್ಕೂ ಹೆಚ್ಚು ಮತ ಪಡೆದ ಯಾವುದೇ ರಾಜಕೀಯ ಪಕ್ಷಗಳೂ ಎಲೆಕ್ಟ್ರೋರಲ್ ಬಾಂಡ್ ಅಕೌಂಟ್ ತೆರೆಯುವ ಅವಕಾಶ ಹೊಂದಿರುತ್ತದೆ. ಎಲೆಕ್ಟ್ರೋರಲ್ ಬಾಂಡ್ ಖರೀದಿಸಿದ ರಾಜಕೀಯ ಪಕ್ಷಗಳು 15 ದಿನಗಳೊಳಗೆ ಹಣವನ್ನು ತಮ್ಮದಾಗಿಸಿಕೊಳ್ಳಬಹುದು. ಇಲ್ಲದೇ ಹೋದಲ್ಲಿ ಆ ಹಣವು ಪಿ.ಎಫ್. ಖಾತೆಗೆ ವರ್ಗಾವಣೆಯಾಗುತ್ತದೆ.