ಬೆಂಗಳೂರು: ನಿನ್ನೆಯಷ್ಟೇ ರಾಜ್ಯ ಬಜೆಟ್ ಮಂಡಿಸುವಾಗ ಸಿಎಂ ಸಿದ್ದರಾಮಯ್ಯ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಿದರು ಇದಕ್ಕೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ತಗಾದೆ ವ್ಯಕ್ತಪಡಿಸಿವೆ.
ಬಜೆಟ್ ಮಂಡನೆ ವೇಳೆ ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ಧ ಎಂದಿದ್ದರು. ಆದರೆ ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನಾಯಕರೇ ಇದನ್ನು ಖಂಡಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ಸೂಕ್ತ ಅನುಮತಿ ಪಡೆದು ಶೀಘ್ರವೇ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಮೇಕೆದಾಟು ಯೋಜನೆಯಡಿಯಲ್ಲಿ ರಚಿಸಲಾಗಿರುವ ವಿಶೇಷ ಸಮಿತಿಗಳ ಅಡಿಯಲ್ಲಿ ಎರಡು ಉಪಸಮಿತಿಗಳನ್ನು ರಚಿಸಲಾಗುವುದು ಎಂದಿದ್ದರು. ಆದರೆ ಕರ್ನಾಟಕ ಸರ್ಕಾರದ ಈ ತೀರ್ಮಾನ ಕಾವೇರಿ ನ್ಯಾಯಾಧಿಕರಣ ತೀರ್ಪಿಗೆ ವಿರುದ್ಧವಾಗಿದೆ ಎಂದು ಡಿಎಂಕೆ ಸಂಸದ ಮೈಕೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಈ ಯೋಜನೆ ಕೈಗೆತ್ತಿಕೊಂಡರೆ ತಮಿಳುನಾಡಿನ ಕೃಷಿ ಭೂಮಿಗಳು ಮರುಭೂಮಿಯಾಗುತ್ತವೆ. ಕಳೆದ 48 ವರ್ಷಗಳಲ್ಲಿ ತಮಿಳುನಾಡು 15.87 ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಕಳೆದುಕೊಂಡಿದೆ. ಯೋಜನೆ ಅನುಷ್ಠಾನಕ್ಕೆ ಸಮಿತಿಗಳನ್ನು ರಚಿಸಲಾಗಿದ್ದು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿನ ಹಕ್ಕುಗಳನ್ನು ಕರ್ನಾಟಕ ಕಸಿದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.