ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರ ರಸ್ತೆಯಲ್ಲಿ ಈ ಶವ ಪತ್ತೆಯಾಗಿದೆ.
ಶವ ಕಂಡುಬಂದಿರುವ ಮಾರುತಿ ಎಸ್ಟೀಮ್ ಕಾರಿನ ಎಲ್ಲ ಗ್ಲಾಸ್ ಕ್ಲೋಸ್ ಆಗಿದ್ದು, ಸಾವಿಗೀಡಾದ ವ್ಯಕ್ತಿ ಬೆಂಗಳೂರಿನ ಡೇರಿ ಸರ್ಕಲ್ ನಿವಾಸಿ ಪಾರ್ಥಸಾರಥಿ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಈ ವ್ಯಕ್ತಿ ಬೇಸರದಲ್ಲಿ ಗದ್ಗದಿತರಾಗಿ ತಮಿಳಿನಲ್ಲಿ ಮಾತನಾಡುತ್ತ ನೋವು ತೋಡಿಕೊಂಡ ವಿಡಿಯೋ ತುಣುಕುಗಳು ಕೂಡ ಲಭಿಸಿವೆ.
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯೊಂದನ್ನು ಹೊಂದಿದ್ದ ಇವರು ನಷ್ಟದಿಂದಾಗಿ ಎರಡು ತಿಂಗಳ ಹಿಂದೆ ಅದನ್ನು ಕ್ಲೋಸ್ ಮಾಡಿದ್ದರು. ಅವರ ಶವ ಕಾರಿನ ಡ್ರೈವರ್ ಸೀಟ್ನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಮದ್ಯ ಹಾಗೂ ನೀರಿನ ಬಾಟಲಿ ಪತ್ತೆಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.