ಲಾಕ್ ಡೌನ್ ನಲ್ಲಿ ಜನರ ಕಷ್ಟಕ್ಕೆ ಪೊಲೀಸ್ ಹೃದಯವೊಂದು ವಿನೂತನವಾಗಿ ಮಿಡಿದು ಗಮನ ಸೆಳೆದಿದೆ.
ಲಾಕ್‌ಡೌನ್ ಅವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ರಕ್ತದ ತೀವ್ರ ಅಭಾವ ಇರುವುದನ್ನು ಮನಗಂಡು ರಕ್ತದಾನಿಗಳಿಗೆ ಉಚಿತ ವಾಹನ ವ್ಯವಸ್ಥೆ ಮಾಡುವ ಮೂಲಕ ಕಾನ್‌ಸ್ಟೆಬಲ್ ಕರಬಸಪ್ಪ ಗೊಂದಿ ಅವರು ಜಿಲ್ಲೆಯ ಜನರ ಮನಗೆದ್ದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಆಡೂರು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕರಬಸಪ್ಪ ಗೊಂದಿ ಅವರು ಇದುವರೆಗೆ ಸ್ವತಃ 27 ಬಾರಿ ರಕ್ತದಾನ ಮಾಡಿದ್ದಾರೆ. ರಕ್ತದಾನ ಮತ್ತು ನೇತ್ರದಾನ ಕ್ಷೇತ್ರದ ಅನನ್ಯ ಸೇವೆ ಮಾಡಿರುವ ಇವರು ಇನ್ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ 2 ರಾಷ್ಟ್ರೀಯ ದಾಖಲೆ, 2 ವಿಶ್ವ ದಾಖಲೆ ಮಾಡಿದ್ದಾರೆ.
ಕಾನ್‌ಸ್ಟೆಬಲ್ ಕರಬಸಪ್ಪ ಗೊಂದಿ ಮಾತನಾಡಿ, ಬೆಲೆ ಬಾಳುವ ವಾಹನಗಳಿಗೆ ಸರ್ವಿಸ್ ಮಾಡಿಸುವ ರೀತಿಯಲ್ಲೇ, ಬೆಲೆ ಕಟ್ಟಲಾಗದ ದೇಹಕ್ಕೆ ಸರ್ವಿಸ್ ಮಾಡಿಸುವ ವಿಧಾನವೇ ರಕ್ತದಾನ. ಲಾಕ್‌ಡೌನ್ ಅವಧಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್ ವತಿಯಿಂದ ಉಚಿತ ರಕ್ತದಾನ ಶಿಬಿರ ನಡೆಯಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 10 ಮಂದಿ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ.
ಇವರಿಗೆ ಅತ್ಯಗತ್ಯವಾಗಿ ಬೇಕಿರುವ ರಕ್ತ ಸಿಗುತ್ತಿರಲಿಲ್ಲ. ಎಲ್ಲ ಬ್ಲಡ್ ಬ್ಯಾಂಕ್‌ಗಳಲ್ಲೂ ರಕ್ತದ ಕೊರತೆ ಕಾಡುತ್ತಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ರಕ್ತದಾನ ಬಗ್ಗೆ ಪ್ರಕಟಣೆ ನೀಡಿ, 41 ಮಂದಿಯಿಂದ ರಕ್ತದಾನ ಮಾಡಿಸಿದ್ದೇನೆ ಎಂದಿದ್ದಾರೆ.