ಬೆಂಗಳೂರು : ರೌಡಿಶೀಟರ್ ಪತಿಯೊಬ್ಬ ಮಕ್ಕಳೆದುರೇ ತನ್ನ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ಘಟನೆ ಆಡುಗೋಡಿ ಬಳಿಯ ಬಜಾರ್ ಸ್ಟ್ರೀಟ್ನಲ್ಲಿ ನಡೆದಿದೆ.
ನೀಲಸಂದ್ರ ನಿವಾಸಿ ದಯಾನಂದ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಆರೋಪಿ ಭಾನುವಾರ ರಾತ್ರಿ ಕುಡಿದು ಬಂದು ಪತ್ನಿ ಪ್ರಿಯಾಂಕಾ ಫೋನ್ನಲ್ಲಿ ಯಾರೊಂದಿಗೋ ಮಾತನಾಡುತ್ತಾಳೆ ಎಂದು ಗಲಾಟೆ ಶುರು ಮಾಡಿದ್ದಾನೆ. ಅಲ್ಲದೇ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಬೇರೋಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ.
ಬಳಿಕ ಆಕೆಯ ತೊಡೆ ಹಾಗೂ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟು ಮಾತ್ರವಲ್ಲದೇ ಪ್ರಿಯಾಂಕಾ ಜೋರಾಗಿ ಕಿರುಚಿದ್ದು ಸ್ಥಳೀಯರು ಸೇರಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಕೂಡಲೇ ಸೇರಿದ್ದ ಜನ 112ಕ್ಕೆ ಕರೆ ಮಾಡಿದ್ದು, ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.