ಖನಿಜ ಭೂಮಿ ಸರ್ಕಾರಕ್ಕೆ ಮರಳಿ ಪಡೆಯಲು ಕ್ರಮವಹಿಸಿ ಎಂದ ಸಚಿವ

ಸೋಮವಾರ, 5 ನವೆಂಬರ್ 2018 (14:25 IST)
ಖನಿಜ ಪ್ರದೇಶಗಳಲ್ಲಿ ಈಗಾಗಲೆ ಖನಿಜ ಸಂಪತ್ತನ್ನು ಪಡೆದುಕೊಂಡಂತಹ  ಭೂಮಿಗಳಲ್ಲಿ ಪ್ರಾಯೋಗಿಕವಾಗಿ ಸರ್ಕಾರಿ ಕಟ್ಟಡ ಹಾಗೂ ಕಾಮಗಾರಿಗಳು ಕೈಗೊಳ್ಳಲು ಸದರಿ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಅರ್ಹರಿಂದ ಆಸಕ್ತಿ ಅಭಿವ್ಯಕ್ತಿ  ಆಹ್ವಾನಿಸಿ ಎಂದು ಸಮಾಜ ಕಲ್ಯಾಣ ಸಚಿವ ಹೇಳಿದ್ದಾರೆ.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಖನಿಜ ನಿಧಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ನಗರ-ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿ ಕೊರತೆಯಿರುವುದರಿಂದ ಇಂತಹ ಉಪಯೋಗಿಸಲಾದ ಖನಿಜ ಪ್ರದೇಶವನ್ನು ಮರಳಿ ಪಡೆಯುವುದರ ಮುಖಾಂತರ ಭೂಮಿ ಕೊರತೆಯನ್ನು  ಸರಿದೂಗಿಸಬಹುದಾಗಿದೆ ಎಂದರು.

ಜಿಲ್ಲೆಯ ನಡೆಯುವ ಗಣಿಗಾರಿಕೆಯಿಂದ ಪ್ರತ್ಯಕ್ಷ  ಮತ್ತು ಪರೋಕ್ಷವಾಗಿ ಪ್ರಭಾವಕ್ಕೊಳಗಾಗುವ ಪ್ರದೇಶಗಳಲ್ಲಿ ಜಿಲ್ಲಾ ಖನಿಜ ನಿಧಿಯಿಂದ 2018-19ನೇ ಸಾಲಿಗೆ ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಉದ್ಯೋಶ ಕೌಶಲ್ಯದಂತಹ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ಸಂಬಂಧ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ 2018-19ನೇ ಸಾಲಿನಲ್ಲಿ ಖನಿಜ ನಿಧಿಗೆ ಜಮಾವಾಗುವ ಅಂದಾಜು ಮೊತ್ತ 6343.04 ಲಕ್ಷ ರೂ. ಮೊತ್ತಕ್ಕೆ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ನವೆಂಬರ್ 10 ರೊಳಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಖನಿಜ ನಿಧಿಯಡಿ ಮಹತ್ವದ ಯೋಜನೆಗಳೇನಾದರು ಕೈಗೊಳ್ಳಬೇಕೆಂದು ಶಾಸಕರು ಇಚ್ಚಿಸಿದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸಬಹುದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ