ಡಿಕೆಶಿಗೆ ಅಯ್ಯೋಪಾಪ ಎನ್ನುವ ಸ್ಥಿತಿ: ಸಚಿವ ಅಶ್ವತ್ಥನಾರಾಯಣ

ಶನಿವಾರ, 14 ಮೇ 2022 (14:59 IST)
ಬೆಂಗಳೂರು: ನನ್ನನ್ನು ಟಚ್‌ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಈಗ ಅಯ್ಯೋಪಾಪ ಎನ್ನುವ ಸ್ಥಿತಿ ಬಂದಿದೆ. ತನ್ನ ವಿರುದ್ಧ ಮಾತನಾಡೋರನ್ನೆಲ್ಲಾ ನಾಶಮಾಡುತ್ತೇನೆ ಎಂದು ಬಿಲ್ಡಪ್‌ ಕೊಡುತ್ತಿದ್ದ ಅವರೀಗ ತಮ್ಮದೇ ಪಕ್ಷದ ಒಬ್ಬ ಹೆಣ್ಣು ಮಗಳಿಂದ ಮುಜುಗರಕ್ಕೀಡಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಟಾಂಗ್‌ ನೀಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಅವರು ಆ ರೀತಿ ಮಾತನಾಡುವುದಿಲ್ಲ ಎಂದುಕೊಂಡಿದ್ದೇನೆ ಎಂದರು.
 
 ಇದು ಕಾಂಗ್ರೆಸ್‌ನ ಆಂತರಿಕ ವಿಚಾರ. ಆದರೂ ನನ್ನನ್ನು ಇದರಲ್ಲಿ ಸೇರಿಸಿ ಪ್ರಶ್ನಿಸುತ್ತಿರುವುದಕ್ಕೆ ಹೇಳುತ್ತಿದ್ದೇನೆ. ‘ರಮ್ಯಾ ಅವರ ಟ್ವೀಟ್‌ನಿಂದ ಡಿ.ಕೆ.ಶಿವಕುಮಾರ್‌ಗೆ ಸಂಪೂರ್ಣ ಶೇಪ್‌ ಔಟ್‌ ಆಗಿದೆ. ಡಿ.ಕೆ.ಶಿವಕುಮಾರ್‌ ರಾಂಗ್‌ ನಂಬರ್‌ಗೆ ಡಯಲ್‌ ಮಾಡಿದ್ದು ಅವರ ತಪ್ಪು. ನನ್ನನ್ನು ಮುಟ್ಟಿದ ಅವರಿಗೆ ಈಗ ಅಯ್ಯೋ ಪಾಪ ಎನ್ನುವ ಸ್ಥಿತಿ ಬಂದಿದೆ. 
 
ಏನೋ ಆಪಾದನೆ ಮಾಡಿ ದಾರಿ ತಪ್ಪಿಸಬೇಕೆಂದು ಹೊರಟವರಿಗೆ ಅವರ ಪಕ್ಷದವರೇ ಪಾಠ ಕಲಿಸಿದ್ದಾರೆ. ತಮ್ಮದೇ ಪಕ್ಷದ ಹೆಣ್ಣು ಮಗಳ ತೇಜೋವಧೆ ಮಾಡಿದರೆ ಏನಾಗುತ್ತದೆ ಎಂದು ಅವರಿಗೆ ಬಿಸಿ ಮುಟ್ಟಿದೆ. ವ್ಯಕ್ತಿಯ ಸ್ವಾತಂತ್ರ್ಯ ಪರಸ್ಪರ ಸ್ನೇಹ ಸಂಬಂಧ ಪ್ರಶ್ನಿಸುವ ಕೀಳುಮಟ್ಟಕ್ಕೆ ಇಳಿದ ಅವರ ಬಗ್ಗೆ ಯಾರಿಗೂ ಕನಿಕರ ಹುಟ್ಟಲು ಸಾಧ್ಯವಿಲ್ಲ. ರಮ್ಯಾ ಅವರ ಬಗ್ಗೆ ಅವರ ಹೇಳಿಕೆಯಿಂದ ಡಿ.ಕೆ.ಶಿವಕುಮಾರ್‌ ವ್ಯಕ್ತಿತ್ವ ಮನೋಭಾವದ ಎಂತಹದ್ದು ಎಂದು ಇಡೀ ಸಮಾಜಕ್ಕೆ ಅನಾವರಣವಾಗಿದೆ’ ಎಂದರು.
 
ಒಬ್ಬ ಹೆಣ್ಣು ಮಗಳ ತೇಜೋವಧೆ ಮಾಡಿದ ಡಿ.ಕೆ.ಶಿವಕುಮಾರ್‌ ವರ್ತನೆಯಿಂದ ಸಾಕಷ್ಟು ಕಾಂಗ್ರೆಸ್‌ ನಾಯಕರೂ ಬೇಸತ್ತಿದ್ದಾರೆ. ಇಂತಹವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರಲ್ಲ ಎಂದು ಮುಜುಗರ ಅನುಭವಿಸುತ್ತಿದ್ದಾರೆ. ಇದನ್ನು ಕೆಲವರು ಟ್ವೀಟ್‌ ಮಾಡಿ ಅಸಮಾಧಾನವನ್ನೂ ಹೊರಹಾಕಿದ್ದಾರೆ’ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ