ಮನೆ ಅಂಗಳಕ್ಕೂ ನುಗ್ಗಿತು ನೀರು: ಕಡಲ ಕೊರೆತ ತೀವ್ರ

ಮಂಗಳವಾರ, 17 ಜುಲೈ 2018 (14:03 IST)
ಭಾರಿ ಮಳೆಯಿಂದಾಗಿ ಕಡಲ ನೀರು ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ಕಡಲ ತಡಿಯ ಜನರು ಆತಂಕದಲ್ಲಿ ಕಾಲ ದೂಡುವಂತಾಗಿದೆ. ಕಡಲ ಕೊರೆತ ಕೂಡ ತೀವ್ರಗೊಂಡಿದ್ದು, ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮ ಪಂಚಾಯಿತಿ, ಕೋಡಿ ಹಳೆಅಳವೆಯಲ್ಲಿ ತೀವ್ರ ಕಡಲ ಕೊರೆತ ಸಂಭವಿಸಿದ್ದು, ಮನೆ ಅಂಗಳಕ್ಕೂ ಅಲೆ ನುಗ್ಗಿದೆ. ಹೀಗಾಗಿ ಅಲ್ಲಿನ ಪರಿಸರ ವಾಸಿಗಳಲ್ಲಿ  ಆತಂಕ ಮೂಡಿಸಿದೆ.  

ಕಳೆದ ಮೂರು ದಿನದಿಂದ ಕೋಡಿ ಪರಿಸರದಲ್ಲಿ ಕಡಲ ಅಬ್ಬರ ಜಾಸ್ತಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಅಲೆಗಳ ಉಕ್ಕಿ ಸಮುದ್ರ ತೀರದಲ್ಲಿ ಹಾಕಿದ ತಡೆ ಗೋಡೆ ದಾಟಿ ಮನೆ ಅಂಗಳಕ್ಕೆ ಅಪ್ಪಳಿಸಿದೆ. ತಡೆಗೋಡೆ ಕಲ್ಲು ಸಮುದ್ರಕ್ಕೆ ಜಾರಿಕೊಂಡಿದೆ. ಅಲೆ ರಭಸಕ್ಕೆ ತಡೆ ಗೋಡೆ ಕಲ್ಲಿನ ಸಂಧುಗಳಲ್ಲಿ ನೀರು ನುಗ್ಗಿ ಹತ್ತಾರು ಮಾರು ಡಾಂಬರ್ ರಸ್ತೆ ಒಳಭಾಗದಲ್ಲಿ ಟೊಳ್ಳು ಕೊರೆದಿದ್ದು, ರಸ್ತೆ ಕೂಡಾ ಅಪಾಯದಲ್ಲಿದೆ. ಒಂದು ಕಡೆ ಭೂಮಿ ಕೂಡಾ ಹೊಂಡ ಬಿದ್ದು, ತಡೆಗೋಡೆ ಕಲ್ಲು ಮಣ್ಣಲ್ಲಿ ಹೂತು ಹೋಗಿದೆ. ಎಂ.ಕೋಡಿಯಲ್ಲೂ ಅಲೆಗಳ ಅಬ್ಬರವಿದ್ದು, ತಡೆಗೋಡೆ ಒಂದು ಬದಿ ಸಮುದ್ರಕ್ಕೆ ಜಾರಿಕೊಂಡಿದೆ.

ಕಳೆದ ಹತ್ತು ವರ್ಷದ ಹಿಂದೆ ಸಮುದ್ರ ಕೊರೆತದ ಬಾಧೆ ತೀವ್ರವಾಗಿ ಕಾಡಿದ್ದು, ತಡೆಗೋಡೆ ನಿರ್ಮಿಸಿದ ನಂತರ ಮೊದಲಬಾರಿ ಅಲೆ ಮನೆ ಅಂಗಳಕ್ಕೆ ಬಂದಿದೆ. ಕಡಲು ಹೀಗೆ ಮುಂದೆ ಬಂದರೆ ಪರಿಸರದಲ್ಲಿ 60ಕ್ಕೂ ಮಿಕ್ಕ ಮನೆಯಿದ್ದು, ಅಪಾಯ ಸಂಭವಿಸುವ  ಆತಂಕವಿದೆ. ತಕ್ಷಣ ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ